ಮಲೇಬೆನ್ನೂರಿನ ವರ್ತಕರ ಸಭೆಯಲ್ಲಿ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ
ಮಲೇಬೆನ್ನೂರು, ಏ.5- ಎರಡನೇ ಅಲೆಯಲ್ಲಿ ಬಂದಿರುವ ರೂಪಾಂತರ ಕೊರೊನಾ ಸೋಂಕಿಗೆ ಯಾವುದೇ ರೋಗ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ಜನರು ಜಾಗೃತಿ ವಹಿಸಬೇಕೆಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಹೇಳಿದರು.
ಇಲ್ಲಿನ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ಕಿರಾಣಿ ಅಂಗಡಿ, ಹೋಟೆಲ್, ಬೇಕರಿ, ರಸಗೊಬ್ಬರ, ಮೆಡಿಕಲ್ ಶಾಪ್, ಕ್ಷೌರದಂಗಡಿ, ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಆಗಮಿಸಿದ್ದ ಮಹಾಮಾರಿ ಕೊರೊನಾ ಸೋಂಕಿಗೆ ಜ್ವರ, ಶೀತ, ಕೆಮ್ಮು, ಮೈಕೈ ನೋವಿನ ಲಕ್ಷಣಗಳು ಇದ್ದವು. ಆದರೆ ಈಗ ಬಂದಿರುವ ರೂಪಾಂತರ ವೈರಸ್ಗೆ ಯಾವುದೇ ರೋಗ ಲಕ್ಷಣಗಳು ಕಾಣಿಸುತ್ತಿಲ್ಲ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಬೇಕು. ಅಂಗಡಿಗಳಿಗೆ ಮಾಸ್ಕ್ ಧರಿಸದೆ ಬರುವ ಜನರಿಗೆ ಕಡಿಮೆ ಬೆಲೆಯ ಮಾಸ್ಕ್ಗಳನ್ನು ಹಣ ಪಡೆದು ನೀಡುವಂತೆ ಲಕ್ಷ್ಮಿದೇವಿ ವರ್ತಕರಿಗೆ ತಿಳಿಸಿದರು.
45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಬೇಕಾದರೆ ಒಟ್ಟಾಗಿ 10 ಜನರು ಇರಬೇಕು. ಒಬ್ಬಿಬ್ಬರು ಬಂದು ಲಸಿಕೆ ಹಾಕುವಂತೆ ಜೋರು ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಪ್ರಭಾರ ಮುಖ್ಯಾಧಿಕಾರಿ ದಿನಕರ್ ಮಾತನಾಡಿ, ಸರ್ಕಾರ ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿದೆ. ಜನರು ಮೈಮರೆಯದೆ ಜಾಗ್ರತೆಯಿಂದ ಇರಬೇಕು. ಸರ್ಕಾರದ ಸೂಚನೆಗಳನ್ನು ಅಂಗಡಿ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ಶಬರಿ ಬೇಕರಿಯ ಮಣಿ ಮಾತನಾಡಿ, ಮಾಸ್ಕ್ ಧರಿಸದೆ ಬರುವ ಜನರಿಗೆ ಪುರಸಭೆಯಿಂದಲೇ ಮಾಸ್ಕ್ ಕೊಟ್ಟು ಅರಿವು ಮೂಡಿಸಿ ಎಂದರು. ಕಿರಾಣಿ ವರ್ತಕ ಶ್ರೀಪಾದ್ ಶ್ರೇಷ್ಠಿ, ಹರಿಹರ ಬೇಕರಿಯ ಶಾಂತಕುಮಾರ್, ಹಡಪದ ಅಪ್ಪಣ್ಣ ಕಟಿಂಗ್ ಶಾಪ್ ಬಸವರಾಜಪ್ಪ, ಸಾಯಿ ಬೇಕರಿ ಬಸವರಾಜ್ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಮತ್ತೆ ಕೊರೊನಾ ಕಾಲಿಡದಂತೆ ನೋಡಿಕೊಳ್ಳಲು ಸಹಕರಿಸಿ ಎಂದರು. ಪುರಸಭೆ ಉಪಾಧ್ಯಕ್ಷೆ ಅಂಜಿನಮ್ಮ, ಅಧಿಕಾರಿಗಳಾದ ಉಮೇಶ್, ಪ್ರಭು, ಗುರುಪ್ರಸಾದ್, ನವೀನ್ ಇನ್ನಿತರರಿದ್ದರು.