ದಾವಣಗೆರೆ, ಏ.6- ಛತ್ತೀಸ್ ಗಡದಲ್ಲಿ ನಕ್ಸಲರ ದಾಳಿಗೆ ಬಲಿಯಾದ ವೀರ ಯೋಧರಿಗೆ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿಂದು ಸಂಜೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಸಮ್ಮುಖದಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತು.
ರಿಂಗ್ ರಸ್ತೆಯಲ್ಲಿನ ಕ್ಲಾಕ್ ಟವರ್ ಅಮರ್ ಜವಾನ್ ವೃತ್ತದಲ್ಲಿ ಸಮಿತಿ ಪದಾಧಿಕಾರಿಗಳ ಜೊತೆಗೂಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೇಣದ ಬೆಳಕು ಮೂಡಿಸಿ, ಒಂದು ನಿಮಿಷ ಮೌನಾಚರಣೆ ಮಾಡುವುದರ ಮುಖಾಂತರ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು.
ದೇಶದ ಜನರ ರಕ್ಷಣೆಗಾಗಿ ತಮ್ಮ ಜೀವ ಮುಡಿಪಾಗಿಟ್ಟು ವೀರ ಯೋಧರ ಸ್ಮರಣೆ ಸದಾ ನಾವು ಮಾಡಬೇಕು. ಯೋಧರು ಸಂಕಷ್ಟ, ಸಂಘರ್ಷಗಳ ಮಧ್ಯೆ ತಮ್ಮ ಬದುಕು ಸವೆಸುತ್ತಾ ದೇಶದ ಜನರಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಡುತ್ತಿದ್ದಾರೆ. ಇದನ್ನು ಎಂದೂ ಮರೆಯಬಾರದು ಎಂದ ಅವರು, ಯೋಧರನ್ನು ಸ್ಮರಿಸುವ ಕಾರ್ಯಕ್ರಮಗಳು ಯುವ ಸಮೂಹಕ್ಕೆ ಪ್ರೇರಣೆಯಾಗಬೇಕು. ದೇಶದ ರಕ್ಷಣೆಗೆ ನಿಲ್ಲಲು ಸದೃಢರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ. ಯುವರಾಜ್, ಪದಾಧಿಕಾರಿಗಳಾದ ಶಿವು ಶೆಟ್ಟಿ, ಗಂಗಾಧರ್, ಪ್ರಕಾಶ್, ರಾಮಚಂದ್ರ, ಡಿ.ಜೆ. ರವಿ, ಮುಖಂಡರಾದ ರವಿ ಸ್ವಾಮಿ, ಮಂಜುನಾಥ್, ಕುಮಾರ್, ರಘು, ವಿನಯ್ ಜೋಗಪ್ಪನವರ್, ಪ್ರತಾಪ್, ಅಭಿಷೇಕ್, ರಘು, ನಾಗರಾಜ್, ವಾಸು, ಪ್ರಕಾಶ್ ಸೇರಿದಂತೆ ಇತರರು ಇದ್ದರು.