ಸದಾಶಿವ ಆಯೋಗ ವರದಿ ಜಾರಿಗೆ ಮನವಿ

ಹರಿಹರ, ಏ.5- ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವುದೂ ಸೇರಿದಂತೆ ದಲಿತ ಸಮುದಾಯ ಸಂಬಂಧಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ (ಪ್ರೊ.ಬಿ.ಕೃಷ್ಣಪ್ಪ) ಕಾರ್ಯಕರ್ತರು ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತ ನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗ ಳಾದರೂ ಸಮಾಜದಲ್ಲಿ ಸಮಾನತೆ ಮೂಡಿಲ್ಲ. ಅಸ್ಪೃಶ್ಯರ ಸ್ಥಿತಿಯಲ್ಲಂತೂ ಯಾವುದೇ ಸುಧಾರಣೆಯಾಗಿಲ್ಲ. ವರದಿಯಿಂದ ಸಾಮಾಜಿಕ ನ್ಯಾಯ ದೊರಕಲಿದ್ದು, ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕ್ರೀಡಾಂಗಣ ಮಳಿಗೆ ಹರಾಜು ಅಕ್ರಮ: ನಗರದ ತಾಲ್ಲೂಕು ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿದಿದ್ದರೂ, ಕ್ರೀಡಾ ಇಲಾಖೆ ಮರು ಹರಾಜು ಪ್ರಕ್ರಿಯೆ ನಡೆಸದೆ, ಇದ್ದವರಿಗೇ ಮುಂದುವರೆಯಲು ಅವಕಾಶ ನೀಡಿದ್ದಾರೆ. ನಿಯಮ ಬದ್ಧವಾಗಿ ಮರು ಹರಾಜು ಮಾಡಬೇಕೆಂದು ಆಗ್ರಹಿಸಿದರು.

ಅಂಬೇಡ್ಕರ್ ನಿಗಮದಲ್ಲಿ ಪ್ರತಿ ತಾಲ್ಲೂಕಿನ ಮಾದಿಗ ಸಮಾಜದ ಹೆಚ್ಚಿನ ಫಲಾನುಭವಿಗಳಿಗೆ ನಿಗಮದ ಯೋಜನೆಗಳ ಲಾಭ ಸಿಗುವಂತೆ ಯೋಜನೆ ರೂಪಿಸಬೇಕಿದೆ. ರಾಜ್ಯದ ವಸತಿ ಯೋಜನೆಗಳ ಯೋಜನಾ ಗಾತ್ರವನ್ನು ಏರಿಸಬೇಕು. ತಾಲ್ಲೂಕಿನ ಹತ್ತಾರು ಗ್ರಾಮಗಳಲ್ಲಿ ಎಸ್ಸಿ, ಎಸ್ಟಿ ವರ್ಗದವರ ರುದ್ರಭೂಮಿಗೆ ಜಮೀನು ಒದಗಿಸಬೇಕು ಎಂದು ಆಗ್ರಹಿಸಿದರು.

ಎಸ್ಸಿ, ಎಸ್ಟಿ ವರ್ಗದ ಬಡವರು ಮರಣ ಹೊಂದಿದಾಗ ಸರಕಾರದಿಂದ ಶವ ಸಂಸ್ಕಾರಕ್ಕೆಂದು 24.10 ಯೋಜನೆಯಡಿ ಹಣ ನೀಡಲಾಗುತ್ತಿದ್ದು, ಫಲಾನುಭವಿಗಳಿಗೆ ಹಣ ಸುಲಭವಾಗಿ  ತಲುಪಬೇಕು. ದಾವಣಗೆರೆ ವಿವಿಯಲ್ಲಿ  ಪ್ರೊ.ಬಿ. ಕೃಷ್ಣಪ್ಪ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದರು.

ದಸಂಸ ಕಾರ್ಯಕರ್ತರಾದ ವಾಸನದ ಗ್ರಾ.ಪಂ. ಅಧ್ಯಕ್ಷ ಗದಿಗೆಪ್ಪ, ಗ್ರಾ.ಪಂ. ಸದಸ್ಯರಾದ ಮಂಜಪ್ಪ ಭಾನುವಳ್ಳಿ, ಚೌಡಪ್ಪ ಸಿ. ಭಾನುವಳ್ಳಿ, ಮಂಜಪ್ಪ ಗುಳದಹಳ್ಳಿ, ಡಿ.ಎಂ. ಮಂಜುನಾಥ್, ಮಂಜುನಾಥ ವಾಸನ, ಬಿಳಸನೂರು ಅಭಿ, ಡಿ. ರಾಜಪ್ಪ, ವಿ.ಎನ್. ನಾಗರಾಜ್, ಡಿ. ದುರುಗಪ್ಪ ಇನ್ನಿತರರಿದ್ದರು.

error: Content is protected !!