ವಾಲ್ಮೀಕಿ ಜಾತ್ರೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ

ಅಗತ್ಯ ಸೌಲಭ್ಯಗಳಿಗೆ ಬಳಸಲು ಡಿಸಿ ಸೂಚನೆ

ವಾಲ್ಮೀಕಿ ಜಾತ್ರೆ ಭಾವನಾತ್ಮಕ ಸಂಬಂಧದ ಪ್ರತೀಕ – ರಾಜನಹಳ್ಳಿ ಶ್ರೀ

ಮಲೇಬೆನ್ನೂರು, ಫೆ.1 –  ವಾಲ್ಮೀಕಿ ಜಾತ್ರೆಯ ತಾತ್ಕಾಲಿಕ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾದರಿಂದ 1.99 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. 

ರಾಜನಹಳ್ಳಿಯ ಗುರುಪೀಠದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಅಂಗವಾಗಿ ಜಿಲ್ಲಾಡಳಿತ ಹಾಗೂ ಗುರುಪೀಠದ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಬಹುದೆಂದರು. ಕೋವಿಡ್‍ ಮಹಾಮಾರಿ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ, ಹಾಗಾಗಿ ಬಹಳ ಮುಖ್ಯವಾಗಿ ಕೋವಿಡ್‍ ನಿಮಯಮವಳಿಗಳನ್ನು ಪಾಲಿಸಬೇಕು, ಇದರಲ್ಲಿ ಆರೋಗ್ಯ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಜಾತ್ರೆಯಲ್ಲಿ  ಈ ಬಾರಿ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ 10 ರಾಜ್ಯಗಳಿಂದ ಕಲಾವಿದರು ಇಲ್ಲಿಗೆ ಬರುತ್ತಿದ್ದಾರೆ. ಅವರನ್ನು ಕಡ್ಡಾಯವಾಗಿ ಕೋವಿಡ್‍ ಪರೀಕ್ಷೆ ಮಾಡಿಸಿ, ಅವರು ವಾಪಸ್‍ ಹೋಗುವವರಿಗೂ ಅವರ ಆರೋಗ್ಯ ಮತ್ತು ಭದ್ರತೆ ಬಗ್ಗೆ ನಿಗಾವಹಿಸಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.

ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಬಗ್ಗೆಯೂ ಹೆಚ್ಚು ಶ್ರಮ ವಹಿಸಬೇಕು, ಅಡುಗೆ ತಯಾರು ಮಾಡುವ ಜಾಗ ಹಾಗೂ ಅಡುಗೆ ಪದಾರ್ಥಗಳನ್ನು ಪರೀಕ್ಷೆ ಮಾಡಿಸಿ ಜನರಿಗೆ ಊಟ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು.

ಜಾತ್ರೆಯ 8-10 ಸ್ಥಳಗಳಲ್ಲಿ ಎರಡು ದಿನವೂ ಥರ್ಮಲ್ ಸ್ಕ್ಯಾನಿಂಗ್ ಮತ್ತು 5 ಕಡೆ ಸ್ಯಾನಿಟೈಸರ್ ಇಡುವ ವ್ಯವಸ್ಥೆ ಆಗಬೇಕು ಜಾತ್ರೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್‍ ಧರಿಸುವಂತೆ ನೋಡಿಕೊಳ್ಳಬೇಕು. ಎಲ್ಲಿಯೂ ನೂಕು ನುಗ್ಗಲು ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಪೊಲೀಸ್‍ ಇಲಾಖೆಗೆ ಸೂಚಿಸಿದರು. 

ಎಸ್ಪಿ ಹನುಮಂತರಾಯ ಮಾತನಾಡಿ, ಜಾತ್ರೆಯಲ್ಲಿ ಬಹಳ ಮುಖ್ಯವಾಗಿ  ಪಾರ್ಕಿಂಗ್‌ ಮತ್ತು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳವ ಜವಾಬ್ದಾರಿ ನಮ್ಮ ಮೇಲಿದೆ. ವೇದಿಕೆಯಲ್ಲಿ ಶಿಸ್ತು ಕಾಪಾಡಬೇಕು, ಅನಾವಶ್ಯಕ ವಾಹನಗಳನ್ನು ಒಳಗಡೆ ಬಿಡುವುದಿಲ್ಲ, ಊಟದ ಸ್ಥಳಗಳಲ್ಲಿ ನೂಕು ನುಗ್ಗಲು ಆಗದಂತೆ ಎಚ್ಚರ ವಹಿಸುತ್ತೇವೆ ಜಾತ್ರಾ ಸಮಿತಿಯವರು ನಮ್ಮ ಜೊತೆ ಕೈ ಜೋಡಿಸ ಬೇಕೆಂದರು.

ಜಿ.ಪ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸ್ಟಾಲ್‍ಗಳನ್ನು ಹಾಕಲಾಗುವುದು. ಕುಡಿಯವ ನೀರಿನ ತೊಂದರೆ ಆಗದಂತೆ ಗಮನ ಹರಿಸುತ್ತೇವೆ, ಆರೋಗ್ಯ ಇಲಾಖೆಯವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯೇ ಇದ್ದು, ಕೋವಿಡ್‍ ನಿಯಮ ಪಾಲಿಸುವಂತೆ ಜನರಿಗೆ ತಿಳಿಸಬೇಕೆಂದುರು.

ಜಗಳೂರು ಶಾಸಕ ಎಸ್‍.ವಿ. ರಾಮಚಂದ್ರ ಮಾತನಾಡಿ, ಕಳೆದ 2 ಜಾತ್ರೆಗಳು ಯಶಸ್ವಿಯಾಗಿಲು ಜಿಲ್ಲಾಡಳಿತದ ಶ್ರಮ ಬಹಳ ಇದೆ. ಈ ವರ್ಷ ಕೋವಿಡ್‍ ಇರುವ ಕಾರಣ ಹೆಚ್ಚಿನ ನಿಗಾ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾತ್ರೆಯ ಉದ್ದೇಶದ ಜೊತೆಗೆ ಆರೋಗ್ಯವೂ ಬಹಳ ಮುಖ್ಯವಾಗಿದೆ. ಜಾತ್ರೆಗೆ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದೆ, ಎಸ್ಟಿ ಮೀಸಲಾತಿ ಹೆಚ್ಚಳ ಆಗುವುದು ಖಚಿತ, ಈ ಬಗ್ಗೆ ತಾಳ್ಮೆ ಇರಲಿ ಎಂದು ಎಸ್.ವಿ. ರಾಮಚಂದ್ರ ಅವರು ಸಮಾಜಕ್ಕೆ ಮನವಿ ಮಾಡಿದರು.

ಅರಣ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಜಿ. ಈಶ್ವರ್, ಕಾರ್ಮಿಕ ಮುಖಂಡ ಹೆಚ್‍.ಕೆ. ರಾಮಚಂದ್ರಪ್ಪ ಅವರು ಮಾತನಾಡಿದರು. ಸಭೆಯ ಸಾನಿಧ್ಯ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು. ಶಾಸಕ ಎಸ್.ರಾಮಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಮಾತನಾಡಿದರು.

`ವಾಲ್ಮೀಕಿ ವಿಜಯ’ ಸ್ಮರಣ ಸಂಪುಟದ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಠದ ಆಡಳಿತಾಧಿಕಾರಿ ಜಿ.ಓಬಳಪ್ಪ, ಜಿ.ಪಂ. ಮಾಜಿ ಸದಸ್ಯರಾದ ಎಂ.ನಾಗೇಂದ್ರಪ್ಪ, ತ್ಯಾವಣಿಗೆ ಗೋವಿಂದ ಸ್ವಾಮಿ, ಕೆ.ಪಿ. ಪಾಲಯ್ಯ, ಮಠದ ಧರ್ಮದರ್ಶಿಗಳಾದ ಹರ್ತಿಕೋಟೆ ವೀರೇಂದ್ರ ಸಿಂಹ, ನಲವಾಗಲು ನಾಗರಾಜಪ್ಪ, ಕೆ.ಬಿ. ಮಂಜುನಾಥ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್, ಡಿಹೆಚ್‍ಓ ಡಾ|| ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್, ಪಿಡಬ್ಲ್ಯೂಡಿ ಇಇ ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮಿಕಾಂತ್, ಆರ್‍ಟಿಓ ಶ್ರೀಧರ್‍, ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ, ತಾ.ಪಂ ಇಓ ಗಂಗಾಧರಪ್ಪ, ಟಿಹೆಚ್‍ ಓ ಡಾ.ಚಂದ್ರಮೋಹನ್, ಸಿಪಿಐ ಸತೀಶ್, ಪಿಎಸ್‍ಐ ರವಿಕುಮಾರ್, ಕೆಪಿಟಿಸಿಎಲ್ ಎಇಇ ಜಯಪ್ಪ, ಬೆಸ್ಕಾಂ ಇಇ ವಿಜಯಲಕ್ಷ್ಮಿ, ಡಿಸಿಸಿ ಬ್ಯಾಂಕಿನ ತಾವರ ನಾಯ್ಕ್‍, ಸಮಾಜದ ಮುಖಂಡರಾದ ಜಿಗಳಿ ಆನಂದಪ್ಪ, ಕೊಕ್ಕನೂರಿನ ಕೆ.ಹೆಚ್. ಕೊಟ್ರಪ್ಪ, ಡಿ.ಸೋಮಶೇಖರ್, ರಾಜನಹಳ್ಳಿ ಭೀಮಣ್ಣ, ಮಾರುತಿ ಬೇಡರ್‍, ಭಾನುವಳ್ಳಿ ಪುಟ್ಟಪ್ಪ, ಧೂಳೆಹೊಳೆ ವಾಮಣ್ಣ, ವಾಸನ ಮಹಾಂತೇಶ್, ರಾಘು ದೊಡ್ಡಮನಿ, ತಾ.ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಮಹಿಳಾ ಕಾಂಗ್ರೆಸ್‍ ಅಧ್ಯಕ್ಷೆ ಪಾರ್ವತಿ, ಜಿಲ್ಲಾ ವಾಲ್ಮೀಕಿ ಮಹಿಳಾ ಸಮಾಜದ ವಿಜಯಶ್ರೀ ಮಹೇಂದ್ರಕುಮಾರ್, ಗೌರಮ್ಮ ಮಂಜುನಾಥ್ ಸೇರಿದಂತೆ ರಾಜನಹಳ್ಳಿ ಗ್ರಾ.ಪಂ. ಸದಸ್ಯರು, ಶಾಮಿಯಾನ ಮಾಲೀಕ ಕೆಟಿಜೆ ನಗರದ ಲಕ್ಷ್ಮಣ ಮತ್ತಿತರರು ಭಾಗವಹಿಸಿದ್ದರು. 

ಜಾತ್ರಾ ಸಮಿತಿ ಸಂಚಾಲಕ ಹೊದಿಗೆೆರೆ ರಮೇಶ್ ಸ್ವಾಗತಿಸಿದರು. ಪತ್ರಕರ್ತ ಜಿಗಳಿ ಪ್ರಕಾಶ್ ವಂದಿಸಿದರು.

ಹಂದರಕಂಬ ಪೂಜೆ: ಪೂರ್ವಭಾವಿ ಸಭೆಗೆ ಮುನ್ನ ಜಾತ್ರೆಯ ಮಹಾಮಂಟಪ ನಿರ್ಮಾಣಕ್ಕೆ ಹಂದರ ಕಂಬ ಪೂಜೆ ಮಾಡಲಾಯಿತು, ಮಹಾಮಂಟಪಕ್ಕೆ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಹೆಸರನ್ನು ಮತ್ತು ವೇದಿಕೆಗೆ ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

 

error: Content is protected !!