ಮಡಿವಾಳ ಸಮಾಜದ ಮೇಲೆ ಮಲತಾಯಿ ಧೋರಣೆ

ಹರಪನಹಳ್ಳಿ ತಾಲ್ಲೂಕು ಸಮಾಜದ ಮುಖಂಡರಿಂದ ಅಸಮಾಧಾನ

ಹರಪನಹಳ್ಳಿ, ಫೆ.1- ಪಟ್ಟಣದ ತಾಲ್ಲೂಕು ಮಿನಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಸಾಂಕೇತಿಕವಾಗಿ, ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಎಂ.ಎಲ್. ನಂದೀಶ್‌ರವರ ನೇತೃತ್ವದಲ್ಲಿ ಬೆರಳಣಿಕೆಯ ಸಿಬ್ಬಂದಿಯು ಕೇವಲ ಭಾವಚಿತ್ರವಿಟ್ಟು ಹೂವನ್ನು ಹಾಕಿ, ಊದುಬತ್ತಿ ಬೆಳಗಿದರು. ಇದರಿಂದ ಅಸಮಾಧಾನಗೊಂಡ ಸಮಾಜದ ಮುಖಂಡರು ಪೂಜೆಯ ತರುವಾಯ ತಹಶೀಲ್ದಾರ್‌ ಬಳಿ ಪ್ರಶ್ನಿಸಿದ್ದಾರೆ.

ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಯರಬಳ್ಳಿ ಉಮಾಪತಿ, ಪುರಸಭೆ ಸದಸ್ಯ ಅಶೋಕ್ ಹಾರಾಳು, ಮುಖಂಡರು ತಾಲ್ಲೂಕು ಆಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಎಲ್ಲಾ ಜಯಂತಿಗಳನ್ನು ಉತ್ತಮವಾಗಿ ಆಚರಣೆ ಮಾಡಲಾಗುತ್ತಿದೆ, ಆದರೇ 12ನೇ ಶತಮಾನದ ಶರಣರಲ್ಲಿ ಮಾಚಿದೇವರು ಸಹ ಅಗ್ರಗಣ್ಯರು. ಶರಣರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸಮಾಜದ ಮುಖಂಡರ ಜೊತೆ ಒಂದು ಪೂರ್ವಭಾವಿ ಸಭೆ ನಡೆಸಿಲ್ಲ. ಆಹ್ವಾನ ಪತ್ರಿಕೆ ಇಲ್ಲ, ಜೊತೆಗೆ ಇಂದು ಜಯಂತಿಗೆ ಯಾವ ಇಲಾಖೆಯ ಅಧಿಕಾರಿಗಳೂ ಬಂದಿಲ್ಲ. ಸಣ್ಣ ಸಮುದಾಯವೆಂದು ಕಡೆಗಣಿಸಿರುವುದು ಬೇಸರ ತರಿಸಿದೆ ಎಂದು ತಹಶೀಲ್ದಾರ್ ಎಲ್.ಆರ್.ನಂದೀಶ್ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೇ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಮಹನೀಯರ ಜಯಂತಿಗಳನ್ನು ಅದ್ಧೂರಿಯಾಗಿ ಆಚರಿಸದೆ, ಸರಳವಾಗಿಯೇ ಆಚರಿಸಲಾಗುತ್ತಿದೆ. ಜಯಂತಿಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುತ್ತೇನೆ. ಜೊತೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂಬರುವ ವರ್ಷದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸೋಣ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು ಹಾಗೂ ಮುಖಂಡರ ಸಭೆ ಕರೆಯದಿರುವುದಕ್ಕೆ ವಿಷಾದ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಮುಖಂಡರಾದ ಅಂಜಿನಪ್ಪ, ನಾಗರಾಜ್, ದುರುಗಪ್ಪ, ಬಸವರಾಜ್, ಜಿ.ಕೆ.ನಾಗರಾಜ್, ಭರ್ಮಪ್ಪ, ಎಂ.ಬಸವರಾಜ್ ಸೇರಿದಂತೆ ಇತರರು ಇದ್ದರು.

 

error: Content is protected !!