ದಾವಣಗೆರೆ,ಫೆ.1- ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಹೊರತಾಗಿಯೂ ಅಭಿವೃದ್ದಿಗೆ ಪೂರಕವಾದ ಬಜೆಟ್ಟನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಪ್ರತಿಕ್ರಿಯಿಸಿದ್ದಾರೆ.
ಮೂಲಭೂತ ಸೌಲಭ್ಯ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಕೃಷಿ ಸಾಲವನ್ನು 16.50 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ದ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೈಲ್ವೆ ಇಲಾಖೆಯ ಸರ್ವತೋಮುಖ ಅಭಿವೃದ್ದಿಗೆ ದಾಖಲೆ ಮೊತ್ತದ ಅನುದಾನವನ್ನು ಮಾನ್ಯ ಹಣಕಾಸು ಸಚಿವರು ನೀಡಿದ್ದಾರೆ. ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇಕಡ 49 ರಿಂದ 74 ಕ್ಕೆ ಏರಿಕೆ ಮಾಡಲಾಗಿದೆ. ಆರೋಗ್ಯ ಕ್ಷೇತ್ರವನ್ನು ಪ್ರಮುಖ ಆಧಾರ ಸ್ಥಂಭಗಳಲ್ಲಿ ಒಂದಾಗಿರಿಸಿಕೊಂಡಿರುವ ಆರ್ಥಿಕ ಸಚಿವರು ಕೋವಿಡ್ ಮುಕ್ತ ಭಾರತ ಮಾಡುವ ಸಲುವಾಗಿ 35000 ಕೋಟಿ ರೂ. ಅನುದಾನವನ್ನು ಕೋವಿಡ್ ಲಸಿಕೆಗಾಗಿ ಮೀಸಲಿಟ್ಟಿದ್ದಾರೆ.
ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಯೋಜನೆಯನ್ನು ಪುನಃ 1 ಕೋಟಿ ಜನರಿಗೆ ವಿಸ್ತರಣೆ ಮಾಡಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ವರ್ಗವನ್ನು ಗಮನದಲ್ಲಿಟ್ಟು ಕೊಂಡು ಆರ್ಥಿಕತೆಯನ್ನು ಸರಿದಾರಿಗೆ ತಂದು ನಿಲ್ಲಿಸುವಲ್ಲಿ ಅಗತ್ಯ ವಾಗಿರುವ ಎಲ್ಲಾ ಪ್ರಯತ್ನ ಗಳನ್ನು ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ
ಕೇಂದ್ರದ ಮುಂಗಡ ಪತ್ರ ನಿರಾಶಾದಾಯಕ. ಕಾರಣ ನಮ್ಮ ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ. ಎಲ್ಲಾ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ.
ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಮತ್ತು 2021-22ನೇ ಸಾಲಿಗೆ 75 ವರ್ಷದ ಮೇಲ್ಪಟ್ಟವರಿಗೆ ಆದಾಯ ತೆರಿಗೆಯ ವಿವರಗಳನ್ನು ಸಲ್ಲಿಸಲು ವಿನಾಯಿತಿ ನೀಡಲಾಗಿದ್ದು (ಷರತ್ತು ಬದ್ದವಾಗಿ) ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜಿ.ಎಸ್.ಟಿ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ವಿತ್ತೀಯ ಮಂತ್ರಿ ನಿರ್ಮಲ ಸೀತಾರಾಮನ್ ಅವರು ನಮ್ಮ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯಕ್ಕೆ ಉತ್ತಮವಾದ ಕೊಡುಗೆಯನ್ನು ಇದುವರೆಗೂ ಕೊಟ್ಟಿಲ್ಲ.
– ಜಂಬಗಿ ರಾಧೇಶ್, ಅಧ್ಯಕ್ಷರು,
ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ದಾವಣಗೆರೆ.
ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲಾಗಲಿದೆ
ಕೋವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಕಾಗದ ರಹಿತ ಬಜೆಟ್ ಮಂಡನೆ ವಿಶೇಷವಾಗಿತ್ತು.
ಸಾಮಾಜಿಕ ಭದ್ರತೆಯನ್ನು ಸರ್ವರಿಗೂ ಕಲ್ಪಿಸುವ ನಿಟ್ಟಿನಲ್ಲಿ, ಕನಿಷ್ಟ ಸಂಬಳವನ್ನು ಎಲ್ಲಾ ವಿಧದ ಕಾರ್ಮಿಕರಿಗೆ ನೀಡಲು ಪ್ರಸ್ತಾಪ, ಚಿನ್ನ ಮತ್ತು ಬೆಳ್ಳಿ ಮೇಲಿನ ಸುಂಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿತಗೊಳ್ಳುವ ನಿರೀಕ್ಷೆ ಇದೆ. ಉಕ್ಕು ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಅಗ್ಗದ ಗೃಹ ಸಾಲ ಯೋಜನೆಯನ್ನು ಮುಂದುವರೆಸಲು ಮತ್ತು 1.5 ಲಕ್ಷ ರೂ. ವರೆಗಿನ ಬಡ್ಡಿ ಮೇಲಿನ ತೆರಿಗೆ ವಿನಾಯಿತಿಯನ್ನು ಮತ್ತೊಂದು ವರ್ಷ ಅಂದರೆ ಮಾರ್ಚ್ 2022ರವರೆಗೆ ವಿಸ್ತರಿಸಲು ಕೇಂದ್ರ ಸರಕಾರದ ನಿರ್ಧರಿಸಿರುವುದು, ಕೃಷಿಕರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರಕಾರದ ಆದ್ಯತೆ, ಭತ್ತ ಬೆಳೆಗಾರರಿಗೆ 1.72 ಲಕ್ಷ ಕೋಟಿ ರೂ ಅನುದಾನ, ಕೃಷಿಕರಿಗೆ ಸಾಲ ಸೌಲಭ್ಯ ನೀಡಲು ಹೆಚ್ಚಿನ ಮೊತ್ತ ನಿಗದಿ ಹಾಗೂ ಧಾನ್ಯಗಳ ಖರೀದಿಗೆ 10,500 ಕೋಟಿ ರೂಪಾಯಿ ಒದಗಿಸಿರುವುದು ಸ್ವಾಗತಾರ್ಹ. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಪ್ರಸ್ತುತಿಯ ಸಂದರ್ಭದಲ್ಲಿ ರೈಲ್ವೆಗಾಗಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಬ್ರಾಡ್-ಗೇಜ್ ಮಾರ್ಗಗಳ 100% ವಿದ್ಯುದೀಕರಣವನ್ನು ಡಿಸೆಂಬರ್ 2023 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದು ಸ್ವಾಗತಾರ್ಹ.
ಪೆಟ್ರೋಲ್ ಲೀಟರ್ಗೆ 2.5 ರೂ. ಮತ್ತು ಡೀಸೆಲ್ಗೆ 4 ರೂ. ಕೃಷಿ ಅಭಿವೃದ್ಧಿಗೆ ಹೊಸ ಸೆಸ್ ಘೋಷಿಸಿ ನಿರಾಶೆ ಉಂಟು ಮಾಡಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಇಲ್ಲದಿರುವುದು ಸ್ವಲ್ಪ ನಿರಾಸೆ ಉಂಟು ಮಾಡಿದೆ.
– ರೋಹಿತ್ ಎಸ್. ಜೈನ್,
ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಕಾರ್ಯದರ್ಶಿ
ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಕ್ಷೇತ್ರಗಳಿಗೆ ಉತ್ತೇಜನ
ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಇನ್ಯಾಮ್ಸ್ ನಲ್ಲಿ ಸಾವಿರಕ್ಕೂ ಹೆಚ್ಚಿನ ಕೃಷಿ ಮಂಡಿಗಳನ್ನು ಸೇರಿಸಿರುವುದರಿಂದ ರೈತರಿಗೆ ಬೆಳೆಯನ್ನು ಉತ್ತಮ ಬೆಲೆಗೆ ಮಾರಲು ಸಹಕಾರಿಯಾಗುವುದು. ಕೃಷಿ ಸಿಂಚಾಯಿ ಯೋಜ ನೆಯಡಿ ಹತ್ತು ಸಾವಿರ ಕೋಟಿ ರೂ. ಮೀಸಲಿಟ್ಟಿರುವುದರಿಂದ ನೀರಿನ ಸದ್ಭಳಕೆಗೆ ಅನುಕೂಲವಾಗುವುದು. ಕೃಷಿ ಸಂಸ್ಕರಣೆ, ರಾಷ್ಟ್ರೀಯ ಕೃಷಿ ನೀತಿ, ಕೃಷಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಹೊಸ ಯೋಜನೆ ಗಳನ್ನು ಘೋಷಿಸಿದ್ದರೆ ಉತ್ತಮವಾಗುತ್ತಿತ್ತು.
– ಎಂ. ಜಿ. ಬಸವನಗೌಡ,
ತೋಟಗಾರಿಕೆ ವಿಜ್ಞಾನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ.
ಸಂಬಳದಾರರಿಗೆ ಕೇಂದ್ರದಿಂದ ಯಾವುದೇ ರಿಲೀಫ್ ನೀಡಿಲ್ಲ
ಕೊರೊನಾ ವೈರಸ್ನಿಂದ ಉದ್ಯೋಗ ನಷ್ಟ, ಸಂಬಳ ಕಡಿತ, ವೇತನ ಏರಿಕೆಗೆ ಕತ್ತರಿ…. ಹೀಗೆ ಹಲವು ಸಂಕಷ್ಟಗಳನ್ನು ಎದುರಿಸಿದ್ದ ಸಂಬಳದಾರರಿಗೆ ಕೇಂದ್ರ ಸರ್ಕಾರ ಕೂಡಾ ಯಾವುದೇ ರಿಲೀಫ್ ನೀಡಿಲ್ಲ. ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಏರಿಳಿತ ಆಗಿಲ್ಲ. 2020-21ರ ಅವಧಿಯಲ್ಲಿ ಹೇಗಿತ್ತೋ ಹಾಗೆಯೇ ಆದಾಯ ತೆರಿಗೆ ನಿಯಮಗಳು ಮುಂದುವರೆಯಲಿವೆ. 75 ವರ್ಷ ಮೇಲ್ಪಟ್ಟವರು ಆದಾಯ ತೆರಿಗೆ ವ್ಯಾಪ್ತಿಗೆ ಬರೋದಿಲ್ಲ ಎಂದಿರುವ ಕೇಂದ್ರ ಸರ್ಕಾರ, ಪಿಂಚಣಿದಾರರನ್ನು ಆದಾಯ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ. ಸಂಬಳದಾರರು ಕೋವಿಡ್ ಸೆಸ್ನ ಭಯದಿಂದ ಮುಕ್ತರಾಗಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಇಳಿಕೆ ಮಾಡಲಾಗಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ.
ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಪೆಟ್ರೋಲ್ ಮೇಲೆ 2.5 ರೂಪಾಯಿ ಕೃಷಿ ಸೆಸ್, ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಸೆಸ್ ವಿಧಿಸಲು ಸರ್ಕಾರ ಮುಂದಾಗಿದೆ. ಇದರಿಂದ ಎರಡೂ ತೈಲಗಳ ದರ ಏರಲಿದೆ.
ಏರ್ಪೋರ್ಟ್, ವೇರ್ಹೌಸ್ಗಳು, ರಸ್ತೆ ನಿರ್ಮಾಣ, ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಮಾರಾಟ ಮಾಡಲು ನಿರ್ಧರಿಸಿರುವ ಕೇಂದ್ರದ ನಿರ್ಣಯವು ಟೀಕಿಗೆ ಗುರಿಯಾಗಿದೆ
ಕೊರೊನಾ ಸಂಕಷ್ಟದ ನಡುವೆ ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನಿಟ್ಟು ಕೊಂಡಿದ್ದ ಮಧ್ಯಮ ವರ್ಗದ ಜನರಿಗೆ ಭಾರೀ ನಿರಾಸೆ ಯಾಗಿದೆ. ಕೆಲವು ವಸ್ತುಗಳ ಬೆಲೆಗಳು ಏರಿಕೆಯಾಗಿದ್ದರೆ, ಮತ್ತೆ ಕೆಲವೇ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ.
ರೈತ ಪರ ಕೇಂದ್ರ ಬಜೆಟ್ ಸ್ವಾಗತಾರ್ಹ
ಬಜೆಟ್ನಲ್ಲಿ ಕೃಷಿ ರಂಗಕ್ಕೆ ಬಂಪರ್ ಕೊಡುಗೆ ನೀಡಿರುವುದು ಸಂತೋಷದಾಯಕವಾಗಿದೆ.
ಕೋವಿಡ್ನಿಂದಾಗಿ ಕೃಷಿ ವಲಯದಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಈ ಸಾಲಿನ ಬಜೆಟ್ನಲ್ಲಿ ಬೆಂಬಲ ಬೆಲೆ ಯೋಜನೆಯನ್ನು ಮುಂದುವರೆಸಿದ್ದು, ರೈತರಿಂದ ಕೃಷಿ ಉತ್ಪನ್ನ ಖರೀದಿಗಾಗಿ ರೂ.1.72 ಲಕ್ಷ ಕೋಟಿ ಮೀಸಲಿರಿಸುವುದು ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ. ಬೇಳೆಕಾಳು ಖರೀದಿಗೆಂದು ರೂ. 10530 ಕೋಟಿ, ಗೋಧಿ ಖರೀದಿಗಾಗಿ ರೂ. 33,000 ಕೋಟಿ, ಪಶುಸಂಗೋ ಪನೆ, ಮೀನುಗಾರಿಕೆ ರೂ. 40 ಸಾವಿರ ಕೋಟಿ. ಕೃಷಿ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಒತ್ತು, ಕೃಷಿ ನೀರಾವರಿಗೆ ಹೆಚ್ಚುವರಿ ರೂ 5 ಸಾವಿರ ಕೋಟಿ. ಕೃಷಿ ಬೆಳೆಗಳಿಗೆ ವಿಮೆ ವಿಸ್ತರಣೆ. ಕೃಷಿ ಸಾಲದ ಮೊತ್ತ ವನ್ನು ರೂ. 16.5 ಲಕ್ಷ ಕೋಟಿ ರೂಪಾಯಿ ವಿಸ್ತ ರಣೆ. ಬೆಳೆ ನಷ್ಟ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಒತ್ತು ನೀಡಿ ಮಂಡಿಸಿರುವ ಬಜೆಟ್ ರೈತರ ಪರ ವಾಗಿದೆ. ಇದೊಂದು ಐತಿಹಾಸಿಕ ಬಜೆಟ್ ಆಗಿದೆ.
ಕೃಷಿ ಸೆಸ್ ಹೆಸರಲ್ಲಿ ಜನರ ಜೇಬಿಗೆ ಕತ್ತರಿ
ಕೊರೊನಾ ಸಂಕಷ್ಟದ ಮಧ್ಯೆ ಬಹುನಿರೀಕ್ಷಿತ ಕೇಂದ್ರ ಬಜೆಟ್ಟನ್ನು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದು, ದೇಶದ ಜನರಿಗೆ ಭಾರೀ ನಿರಾಶೆಯಾಗಿದೆ. ಕೃಷಿ ಸೆಸ್ನ ಹೆಸರಿನಲ್ಲಿ ಜನರ ಬದುಕನ್ನು ಬರ್ಬಾದ್ ಮಾಡಲಾಗಿದೆ.
ಪ್ರಧಾನಿ ಮೋದಿ ಸರ್ಕಾರದ 9ನೇ ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ, ಹಳಿ ತಪ್ಪಿದ ಮೋದಿ ಲೆಕ್ಕ ವಾಗಿದ್ದು, ಇದೊಂದು ಜನ ವಿರೋಧಿ ಬಜೆಟ್ ಆಗಿದ್ದು ಕೃಷಿ ಸೆಸ್ ಹೆಸರಲ್ಲಿ ದೇಶದ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ.
ಪೆಟ್ರೋಲ್ ಡೀಸೆೆಲ್ ಬೆಲೆ ಈಗಾಗಲೇ ಗಗನಕ್ಕೆ ಏರಿದ್ದು, ಇದೀಗ ಕೃಷಿ ಸೆಸ್ ಹೆಸರಿನಲ್ಲಿ ಪೆಟ್ರೋಲ್ ರೂ. 2.50, ಡೀಸೆೆಲ್ ರೂ. 4.00 ಏರಿಕೆ ಮಾಡಿದ್ದು ಅತ್ಯಂತ ಖಂಡನೀಯವಾಗಿದೆ. ಪೆಟ್ರೋಲ್, ಡೀಸೆೆಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಉಪಯೋಗಿಸುವ ಎಲ್ಲಾ ವಸ್ತುಗಳ ಬೆಲೆಗಳು ಪರೋಕ್ಷವಾಗಿ ಏರಿಕೆ ಆಗಲಿವೆ ಎಂದಿರುವ ಅವರು ಬೆಳೆ ಕಾಳುಗಳು, ಬಟಾಣಿ, ಹುರಿಗಡಲೆ, ಅಡುಗೆ ಎಣ್ಣೆ, ಎಲ್.ಇ.ಡಿ. ಬಲ್ಬ್, ಸೋಲಾರ್ ಬಲ್ಬ್, ಎಸಿ, ಟಿವಿ, ಫ್ರಿಡ್ಜ್ ಇತ್ಯಾದಿ ವಸ್ತುಗಳ ಮೇಲೆ ತೆರಿಗೆ ಏರಿಕೆ ಮಾಡಿ ಕೋವಿಡ್ ಸಂಕಷ್ಟದಲ್ಲಿರುವ ಭಾರತೀಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದು, ಇದನ್ನು ವಿರೋಧಿಸಿ ರಾಷ್ಟ್ರದ ರೈತರು ಕಳೆದ ಎರಡು ತಿಂಗಳಿಂದ ಚಳಿ, ಗಾಳಿ, ಮಳೆ ಎನ್ನದೇ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿ 60ಕ್ಕೂ ಹೆಚ್ಚು ರೈತರು ಜೀವ ತೆತ್ತಿದ್ದಾರೆ. ಈ ಬಗ್ಗೆ ಸೌಜನ್ಯಕ್ಕೂ ರೈತರನ್ನು ಭೇಟಿ ಮಾಡದ ಪ್ರಧಾನಿ ನರೇಂದ್ರ ಮೋದಿ, ಇದೀಗ ರೈತರಿಗಾಗಿ ಕೃಷಿ ಸೆಸ್ ಹೆಸರಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಹಾಸ್ಯಾಸ್ಪದ.
ತೆರಿಗೆ ಭಾರ ಜನರ ಮೇಲೆ ಬೇಡ
ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಿರಾಶದಾಯಕವಾಗಿದೆ. ಈಗಾಗಲೇ ದೇಶದಲ್ಲಿನ ಜನರು ಬೆಲೆ ಏರಿಕೆ ಯಿಂದ ತತ್ತರಿಸಿದ್ದು, ಮತ್ತೆ ತೆರಿಗೆ ಭಾರವನ್ನು ತಪ್ಪಿಸಬಹುದಿತ್ತು. ತೀವ್ರ ವಿತ್ತೀಯ ಕೊರತೆ ಎದುರಿಸುತ್ತಿರುವುದು ಆತಂಕದ ವಿಚಾರವಾಗಿದೆ. ಇದರಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುವ ಪ್ರಭಾವದಿಂದ ಶ್ರೀ ಸಾಮಾನ್ಯರ ಮೇಲೆ ಉಂಟಾಗುವ ಪರಿಣಾಮ ಗಂಭೀರವಾಗುತ್ತದೆ.
12 ಲಕ್ಷ ಕೋಟಿ ಸಾಲಕ್ಕೆ ಸಿದ್ದವಾಗಿರುವುದು ಸರಿಯಲ್ಲ. ಈ ದೇಶದ ಶ್ರೀಮಂತರು ಮತ್ತು ಭ್ರಷ್ಟಾಚಾರದ ಕಪ್ಪು ಹಣವನ್ನು ಹೊರಗೆ ತಂದರೆ ಅದೇ ಸಾಕಾಗುತ್ತದೆ. ಕೃಷಿ ಸೆಸ್ ಉತ್ತಮ ನಿರ್ಧಾರ. ಆದರೆ, ಇದು ಗ್ರಾಹಕರಿಗೆ ಹೊರೆಯಾ ಗದಂತೆ ಸರಿಯಾಗಿ ಅನುಷ್ಠಾನವಾಗಬೇಕು.
ಆರ್ಥಿಕ ಪುನಶ್ಚೇತನಕ್ಕೆ ಒತ್ತು
ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚು ಹಣ ಮೀಸಲಿಡಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸೇರಿಸಿದರೆ 2,65,000 ಕೋಟಿ ಹಣ ಕೊಡಲಾಗುತ್ತಿದೆ.
ಬೇರೆ ದೇಶಗಳಿಗೆ ಹೋಲಿಸಿದರೆ ಕೋವಿಡ್ ನಂತರ ಆರ್ಥಿಕ ಪುನಶ್ಚೇತನ ಹೊಂದುತ್ತಿರುವ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಿದೆ. 500 ಅಮೃತ ನಗರ ಘೋಷಣೆ ಮೂಲಕ ಎಲ್ಲಾ ರೀತಿಯ ಮೂಲಸೌಕರ್ಯ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ.
– ಪ್ರಸನ್ನ ಕುಮಾರ್, ಅಧ್ಯಕ್ಷರು,
ಆರ್ಥಿಕ ಹಾಗೂ ತೆರಿಗೆ ಸ್ಥಾಯಿ ಸಮಿತಿ, ಮಹಾನಗರ ಪಾಲಿಕೆ.