ರೇಣುಕಾಚಾರ್ಯ ಆರೋಪ
ಮಲೇಬೆನ್ನೂರು, ಏ.4- ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕನಾಗಿದ್ದು, ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ವಾಪಸ್ ಕರೆತಂದ ತಪ್ಪಿಗೆ ಯಡಿಯೂರಪ್ಪನವರಿಗೆ ಇಂತಹ ಗಿಫ್ಟ್ ಕೊಡುತ್ತಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಯತ್ನಾಳ್ ಮೇಲೆ ಹರಿಹಾಯ್ದರು.
ಬೆಳ್ಳೂಡಿ ಶಾಖಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ವಿರುದ್ಧ ವಾಗ್ಧಾಳಿ ಮುಂದುವ ರೆಸಿದ ರೇಣುಕಾಚಾರ್ಯ ಅವರು, ಪದೇ ಪದೇ ಸಿಎಂ ಸ್ಥಾನಕ್ಕೆ ಸವಾಲು ಹಾಕುತ್ತಾರೆ. ಪ್ರತಿ ತಿಂಗಳು ಒಂ ದೊಂದು ಡೇಟ್ ಕೊಡುತ್ತಾ ಅವರು ದಿನನಿತ್ಯ ಅರಿವೆ ಹಾವು ಬಿಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಅಂತಾರೆ ಎಲ್ಲವೂ ಠುಸ್ ಆಗಲಿದೆ. ಮೊದಲು ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುವುದನ್ನು ಮೊದಲು ಬಿಡಿ ಎಂದು ಯತ್ನಾಳ್ ಹೇಳಿಕೆಗಳನ್ನು ಲೇವಡಿ ಮಾಡಿದರು.
ವಿಜಯೇಂದ್ರ, ಡಿ.ಕೆ. ಶಿವಕುಮಾರ್ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದು, ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿನಾಕಾರಣ ಅವರ ಮೇಲೆ ಈ ರೀತಿ ಆರೋಪಿಸುವುದು ಸರಿಯಲ್ಲ ಎಂದರು.
ಈಶ್ವರಪ್ಪ, ಯಡಿಯೂರಪ್ಪ ಮಧ್ಯೆ ವೈಮನಸ್ಸಿನ ಶಮನದ ಬಗ್ಗೆ ಮಾತನಾಡಿದ ಅವರು, ಪಕ್ಷದ ಆರಂಭ ದಿಂದ ಯಡಿಯೂರಪ್ಪ, ಅನಂತಕುಮಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಈಶ್ವರಪ್ಪನವರು ಹಿರಿಯರು, ಅನುಭವಿಗಳು. ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕಾದ ವಿಷಯವನ್ನು ರಾಜ್ಯಪಾಲರ ಬಳಿ ಒಯ್ದಿದ್ದು ತಪ್ಪು. ಅನಗತ್ಯವಾಗಿ ಕಾಂಗ್ರೆಸ್ನವರ ಕೈಗೆ ಅಸ್ತ್ರ ಕೊಟ್ಟಂತಾಗಿದೆ. ಉಪಚುನಾವಣೆ ಹೊತ್ತಲ್ಲ ಇದು ಸರಿಯಲ್ಲ. ವಿಶೇಷ ಅನುದಾನ ನೀಡುವ ಪರಮಾಧಿ ಕಾರ ಸಿಎಂ ಅವರಿಗಿದೆ. ಅವರ ವಿವೇಚನೆಯಂತೆ ಬಳಸಿದ್ದಾರೆ. ಈ ವಿಷಯವನ್ನು ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದರು.
ವರಿಷ್ಠರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ, ಎಲ್ಲವೂ ಸರಿ ಹೋಗುತ್ತೆ ಎಂದು ರೇಣುಕಾಚಾರ್ಯ ಹೇಳಿದರು.