ಹರಿಹರದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
ಹರಿಹರ, ಜ.29- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ನನ್ನ ಆಡಳಿತದಲ್ಲಿ ಸಾಧ್ಯವಾಗಲಿಲ್ಲ ಎಂದು ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಪತ್ರವನ್ನು ನೀಡಬೇಕೆ ವಿನಃ ನಮ್ಮ ಪಂಚಮಸಾಲಿ ಸಮಾಜದ ಶಾಸಕರಿಗೆ ರಾಜೀನಾಮೆ ಪತ್ರವನ್ನು ನೀಡಿ ಸರ್ಕಾರವನ್ನು ಉರುಳಿಸುವ ವ್ಯವಸ್ಥೆ ಮಾಡಿ ಎಂದು ನಾವು ಹೇಳುವುದಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.
ನಾವು ಉಪವಾಸ ಸತ್ಯಾಗ್ರಹವನ್ನು ಆರಂಭಿ ಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂ ರಪ್ಪ ಅವರು ಒಂದು ತಿಂಗಳ ಅವಧಿಯೊಳಗೆ ಸಮಾಜಕ್ಕೆ ಮೀಸಲಾತಿ ದೊರಕಿಸುವ ಭರವಸೆ ಯನ್ನು ನೀಡಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ. ಹೀಗಾಗಿ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳುವ ಅನಿವಾರ್ಯತೆ ಬಂದಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಫೆಬ್ರವರಿ ಮೊದಲು ಅಥವಾ ಎರಡನೇ ವಾರದಲ್ಲಿ ಅಧಿವೇಶನ ನಡೆಸಿಕೊಂಡು ಬಂದಿದೆ. ಆದರೆ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ನೋಡಿ, ಮಾರ್ಚ್ ತಿಂಗಳಲ್ಲಿ ನಡೆಸಲು ತೀರ್ಮಾನಕ್ಕೆ ಬಂದಿದ್ದಾರೆ ಎಂದರೆ ಪಂಚಮಸಾಲಿ ಸಮಾಜದ ಹೋರಾಟದ ಪ್ರಭಾವ ಏನು ಎಂಬುದನ್ನು ಇದು ತೋರಿಸುತ್ತದೆ.
ರಾಜ್ಯದ ಬಹುಸಂಖ್ಯಾತ ಸಮುದಾಯವಾ ಗಿರುವ ಪಂಚಮಸಾಲಿ ಸಮಾಜದವರು ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇರುವುದರಿಂದ ಮತ್ತು ರಾಜ್ಯದ ಹಲವಾರು ನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಯಡಿಯೂರಪ್ಪ ನವರು ರಾಜ್ಯದ ಮುಖ್ಯಮಂತ್ರಿಗಳಾಗಲು ಸಮಾಜದ ಜನರ ಸಹಕಾರದ ಅಗತ್ಯವಿದ್ದು, ಇದನ್ನು ಅವರು ಮನಗಾಣಬೇಕು. ಇಷ್ಟು ದಿನಗಳ ಕಾಲ ಮನವಿಯನ್ನು ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಇಲ್ಲಿಯವರೆಗೆ ಸ್ಪಂದಿಸುವ ಕೆಲಸವನ್ನು ಮಾಡದೆ ಇರುವುದರಿಂದ ಇನ್ನು ಮುಂದೆ ಮನವಿ ನೀಡುವುದಿಲ್ಲ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಪಾದಯಾತ್ರೆ ಸಮಿತಿ ಅಧ್ಯಕ್ಷ ದೀಟೂರು ಶೇಖರಪ್ಪ, ಮಲೆಬೆನ್ನೂರು ಬಿ. ಚಿದಾನಂದಪ್ಪ, ಸಂಚಾಲಕ ಪರಮೇಶ್ವರ ಗೌಡ್ರು, ಉಪಾಧ್ಯಕ್ಷ ಮಿಟ್ಟಲಕಟ್ಟಿ ಚಂದ್ರಪ್ಪ, ಜಿ. ನಂಜಪ್ಪ, ಶಿವಕುಮಾರ್ ಸ್ವಾಮಿ, ಹೆಚ್.ಎಸ್. ಅರವಿಂದ್, ಮಂಜುನಾಥ್ , ತಾ.ಪಂ. ಸದಸ್ಯ ಕೊಟ್ರೇಶಪ್ಪ ಸಿರಿಗೆರೆ, ಬಸವ ರಾಜ್ ಮಲೇಬೆನ್ನೂರು, ಶಂಕರ್ ಗೌಡ್ರು ಬಿರಾ ದಾರ, ಗೌಡ್ರು ಪುಟ್ಟಪ್ಪ, ರಾಜು ಇನ್ನಿತರರಿದ್ದರು.