ಬೆಂಗಳೂರು, ಜ. 29 – ಅಧಿಕಾರದಿಂದ ಕೆಳಗಿಳಿಯಲು ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಮುಯ್ಯಿ ತೀರಿಸುವ ಉದ್ದೇಶದಿಂದ ಬಿಜೆಪಿ ಜೊತೆ ಕೈಜೋಡಿಸಿದ ಜೆಡಿಎಸ್ ತನ್ನ ಗುರಿಯಲ್ಲಿ ಯಶಸ್ವಿಯಾಗಿದೆ.
ಇದರ ಮೊದಲ ಹಂತವಾಗಿ ವಿಧಾನಪರಿಷತ್ತಿನಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು ಉಪಸಭಾಪತಿಯಾಗಿ ಇಂದು ಆಯ್ಕೆಗೊಂಡರು.
ಉಪಸಭಾಪತಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕೆ.ಸಿ. ಕೊಂಡಯ್ಯ ಕಣಕ್ಕಿಳಿದಿದ್ದರು.
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಎಂ.ಕೆ. ಪ್ರಾಣೇಶ್ ಗೆಲುವು ಸಾಧಿಸಿದರು.
ಕಾಂಗ್ರೆಸ್ಗೆ ಸಭಾಪತಿ ಸೇರಿ 29 ಸದಸ್ಯ ಬಲವಿದ್ದರೂ ಅವರ ಅಭ್ಯರ್ಥಿಗೆ ಲಭಿಸಿದ್ದು ಕೇವಲ 24 ಮತಗಳು. ಕಾಂಗ್ರೆಸ್ ತನ್ನ ಮತಗಳನ್ನೇ ಪೂರ್ಣವಾಗಿ ಪಡೆಯಲಾಗಲಿಲ್ಲ. ಕಾಂಗ್ರೆಸ್ನ ನಾಲ್ಕು ಸದಸ್ಯರು ಗೈರು ಹಾಜರಾಗಿದ್ದರು.
ಎಂ.ಕೆ.ಪ್ರಾಣೇಶ್ ಅವರಿಗೆ 41 ಮತಗಳು, ಕಾಂಗ್ರೆಸ್ನ ಕೆ.ಸಿ. ಕೊಂಡಯ್ಯ ಅವರಿಗೆ 24 ಮತಗಳು ಚಲಾವಣೆಗೊಂಡವು. ಪ್ರಾಣೇಶ್ ಪರವಾಗಿ ಜೆಡಿಎಸ್ ಸದಸ್ಯರು ಮತ ಚಲಾಯಿಸಿ ದರು. ಉಪಸಭಾಪತಿಯಾಗಿದ್ದ ಜೆಡಿಎಸ್ನ ಧರ್ಮೇಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಕಳೆದ ಅಧಿವೇಶನದ ಸಂದರ್ಭದಲ್ಲೇ ಹಾಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಕಿತ್ತಾಟದಿಂದ ಅವಿಶ್ವಾಸ ಗೊತ್ತುವಳಿ ಚರ್ಚೆಗೇ ಬರಲಿಲ್ಲ, ಇದೀಗ ಮತ್ತೆ ಗೊತ್ತುವಳಿ ಕೈಗೆತ್ತಿಕೊಳ್ಳಲು ಸಭಾಪತಿ ಅವರಿಗೆ ಮನವಿ ಮಾಡಲಾಗಿದೆ.
ಇದನ್ನು ಅರಿತ ಸಭಾಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ, ಇವರಿಂದ ತೆರವಾಗುವ ಸ್ಥಾನಕ್ಕೆ ಜೆಡಿಎಸ್ನ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣ್ಕಿಳಿಸಲಿವೆ.