ದಾವಣಗೆರೆ, ಏ. 3 – ರಾಜ್ಯ ಸರ್ಕಾರದಲ್ಲಿ ಸಾಮೂಹಿಕ ಹೊಣೆಗಾರಿಕೆ ಇಲ್ಲದಂತಾಗಿದೆ. ಒಬ್ಬರ ಮೇಲೊಬ್ಬರಿಗೆ ವಿಶ್ವಾಸ ಇಲ್ಲ. ಇಂತಹ ಸರ್ಕಾರ ಹೋಗಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯಪಾಲರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬರೆದಿರುವ ಪತ್ರ ನೋಡಿದಾಗ ಸಾಮೂಹಿಕ ಹೊಣೆ ಗಾರಿಕೆ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ಸರ್ಕಾರ ಈಗ ಕುಸಿದಿದೆ. ನನ್ನ ಪ್ರಕಾರ ರಾಜ್ಯಪಾಲರು ಈಗ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸ್ಸು ಮಾಡಬೇಕು ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ, ಆಡಳಿತ ಸಂಪೂರ್ಣ ಕುಸಿದಿದೆ ಎಂದರು.
ಈಶ್ವರಪ್ಪ ಅವರಲ್ಲದೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರೇ ಆರೋಪಿಸುತ್ತಿದ್ದಾರೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಎಂದು ಹೇಳಿದರು.
ನಾವು ವಿರೋಧಿಸಿದರೆ, ವಿರೋಧಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಅವರ ಪಕ್ಷದವರೇ ಆರೋಪಿಸುತ್ತಿದ್ದಾರೆ. ಹೀಗಾಗಿ ಅವರೇ ಸತ್ಯ ಹೇಳುತ್ತಾರೆ ಎಂದರ್ಥ ಎಂದು ಸಿದ್ದರಾಮಯ್ಯ ತಿಳಿಸಿದರು.