ಕೋವಿಡ್ ಸಂಕಷ್ಟದಲ್ಲೂ ಸರ್ಕಾರ ಅಭಿವೃದ್ಧಿಗೆ ಒತ್ತು

ಜಗಳೂರಿನ ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಜಗಳೂರು, ಜ. 27- ಕೊವಿಡ್ ಸಂಕಷ್ಟದಲ್ಲೂ ಮುಖ್ಯಮಂತ್ರಿ ಯಡಿ ಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ನೀರಾವರಿ ಸೇರಿದಂತೆ, ಅಭಿವೃದ್ದಿ ಕಾಮಗಾರಿಗೆ ಒತ್ತು ನೀಡಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್  ಹೇಳಿದರು.

ಪಟ್ಟಣದ ಗುರುಭವನದ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಉದ್ಘಾಟನೆ ಮತ್ತು ಸರ್ಕಾರಿ ಸೌಲಭ್ಯಗಳ ವಿತರಣೆಯ ಜನಸ್ಪಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾಡಳಿತ ಜನಸ್ಪಂದನ ಕಾರ್ಯಕ್ರಮದ ಮೂಲಕ ಉತ್ತಮವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕೆರೆ ತಂಬಿಸುವ ಮತ್ತು ಭದ್ರಾ ನೀರಾವರಿ ಯೋಜನೆ ಸೌಲಭ್ಯದಿಂದ ಬರದ ನಾಡಿನ ರೈತರಿಗೆ ನೆಮ್ಮದಿ ದೊರೆಯಲಿದೆ ಎಂದರು.

 ಸಂಸದ‌ ಜಿ.ಎಂ. ಸಿದ್ದೇಶ್ವರ ಮಾತನಾಡಿ, ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಭದ್ರಾ ಮೇಲ್ದಂಡೆ ಯೋಜನೆ ಸೇರ್ಪಡೆಗೊಂಡಿದೆ. ಅಲ್ಲದೆ 57 ಕೆರೆ ನೀರು ತುಂಬಿಸುವ ಯೋಜನೆ ಯಲ್ಲಿ ಶೀಘ್ರ ದಲ್ಲಿ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ.ಜಾತಿ ಮತ್ತು ಪ.ಪಂಗಡ ಸಮುದಾಯ ಹೆಚ್ಚಾಗಿರುವ ತಾಲ್ಲೂಕಿನ ರೈತರಿಗೆ ನೀರಾವರಿ ವರದಾನವಾಗಿದೆ. ಇಲ್ಲಿನ ಜನತೆ ಆರ್ಥಿಕ ಸದೃಢರಾಗಿ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.

ಶಾಸಕ ಎಸ್.ವಿ. ರಾಮಚಂದ್ರ ಅವರು 2 ವರ್ಷದೊಳಗೆ 500 ಕೋಟಿ ರೂ. ಅನುದಾನ‌ ತಂದಿದ್ದಾರೆ. ಇನ್ನು 3 ವರ್ಷಗಳಲ್ಲಿ 3,000 ಕೋಟಿ ಅನುದಾನದ ಸರದಾರ ಆಗುವುದರಲ್ಲಿ ಅನುಮಾನವಿಲ್ಲ ಎಂದು ಬಣ್ಣಿಸಿದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ನೀರು-ಸೂರು ಕಲ್ಪಿಸುವುದು ನನ್ನ ಗುರಿ ಯಾಗಿತ್ತು. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ನವರ ಬಳಿ ಮನವಿ ಮಾಡಿದ ಫಲವಾಗಿ ತಾಲ್ಲೂಕಿನಲ್ಲಿ ನೀರಾವರಿ ಕನಸು ನನಸಾಗುವ ಹಂತದಲ್ಲಿದೆ ಎಂದರು.

ಬಿದರಕೆರೆ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡ ವಿನ್ಯಾಸ 35 ಲಕ್ಷ ರೂ., ಪಟ್ಟಣದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ 2ಕೋಟಿ 78 ಲಕ್ಷ ರೂ., ಪಲ್ಲಾಗಟ್ಟೆಯಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ 3 ಕೋಟಿ 25 ಲಕ್ಷ ರೂ. ವೆಚ್ಚದಲ್ಲಿ  ವಿವಿಧ ಗ್ರಾಮಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗಿದೆ ಎಂದು ತಿಳಿಸಿದರು.

ಬಸ್ ಡಿಪೋ ಜಮೀನು ಮಂಜೂರು: ಜಿಲ್ಲಾಧಿ ಕಾರಿಗಳ ಕಾಳಜಿಯಿಂದ ಪಟ್ಟಣದಲ್ಲಿ ಸರ್ವೆ ನಂ.51 ರಲ್ಲಿ 4.31 ಎಕರೆ ಜಮೀನಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಪೋ ನಿರ್ಮಾಣಕ್ಕಾಗಿ ಸ್ಥಳ ಕಾಯ್ದಿರಿಸಲಾಗಿದೆ. ಜಮೀನನ್ನು ಕೆಎಸ್ ಆರ್ ಟಿಸಿ ಡಿಸಿಯವರಿಗೆ ಇಂದು ಹಸ್ತಾಂತರಗೊಳಿಸಿದೆ. ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ಡಿಪೋ ಕನಸ್ಸು ನನಸಾಗಲಿದೆ  ಎಂದರು.

ಸಮಾರಂಭದಲ್ಲಿ ಜಿ.ಪಂ‌ ಅಧ್ಯಕ್ಷೆ ಶಾಂತಕುಮಾರಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಓ ಪದ್ಮಾಬಸವಂತಪ್ಪ, ಎ.ಎಸ್.ಪಿ ರಾಜೀವ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್,   ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ ರೆಡ್ಡಿ, ಪ.ಪಂ‌. ಅಧ್ಯಕ್ಷ ಆರ್.ತಿಪ್ಪೇಸ್ವಾಮಿ,  ಜಿ.ಪಂ ಸದಸ್ಯರಾದ ಎಸ್.ಕೆ. ಮಂಜುನಾಥ್, ರಶ್ಮಿ ರಾಜಪ್ಪ, ಉಮಾ ವೆಂಕಟೇಶ್, ತಾ.ಪಂ. ಸದಸ್ಯರಾದ ಸಿದ್ದೇಶ್, ಬಸವರಾಜ್, ಶಂಕರನಾಯ್ಕ, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ. ಇಓ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ ಎಇ ರುದ್ರಪ್ಪ, ಬಿಇಓ  ಸಿ.ಎಸ್. ವೆಂಕಟೇಶ್  ಮತ್ತಿತರರು ಭಾಗವಹಿಸಿದ್ದರು.

error: Content is protected !!