ಆವರಗೊಳ್ಳ ಶ್ರೀ
ದಾವಣಗೆರೆ, ಮಾ. 31- ಗುರುವಿನಲ್ಲಿ ಪ್ರತಿಯೊಬ್ಬರೂ ಶ್ರದ್ಧೆ, ನಿಷ್ಠೆ, ಭಕ್ತಿ ಹೊಂದಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಶ್ರೀಗಳು ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶಿವಾನುಭವಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಗುರುವಿನ ಸ್ಥಾನ ಶ್ರೇಷ್ಠವಾಗಿದ್ದು, ಅಧ್ಯಾತ್ಮಿಕ ಜ್ಞಾನವನ್ನು ಭಕ್ತರಿಗೆ ನೀಡುವ ಸಾಮರ್ಥ್ಯವನ್ನು ಗುರು ಹೊಂದಿದ್ದಾನೆ ಎಂದು ಹೇಳಿದರು.
ರಾಜ – ಮಹಾರಾಜರೂ ಸಹ ಗುರುವನ್ನು ಗೌರವದಿಂದ ಕಾಣುತ್ತಿದ್ದರು, ಅನೇಕ ಮಹಾಪುರುಷರು ಗುರುವಿನ ಮಾರ್ಗದರ್ಶನದಿಂದ ತಮ್ಮ ಜೀವನದಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಶಿಲಾಮಂಟಪವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸುವರು ಎಂದು ತಿಳಿಸಿದರು.
ಅತಿಥಿಗಳಾಗಿ ಆಶ್ರಮದ ಸಹ ಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ, ನಿರ್ದೇಶಕ ಬಸವನಗೌಡರು, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ಹಿರಿಯ ಮುಖಂಡರಾದ ವಾಮದೇವಪ್ಪ, ಬಸವರಾಜಪ್ಪ ಭಾಗವಹಿಸಿದ್ದರು.
ಆಶ್ರಮದ ಅಂಧ ಮಕ್ಕಳು ಹಾಗೂ ವರ್ಷಾ ಪ್ರಾರ್ಥಿಸಿದರು. ಪಂಚಾಕ್ಷರಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.