ದಾವಣಗೆರೆ, ಜ.24- ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಆದರೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಇದೇ ಮೊದಲಲ್ಲ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಮತ್ತು ಭ್ರಷ್ಟಾಚಾರ ನಡೆಯುವುದು ಸಾಮಾನ್ಯವಾಗಿದೆ.
ಇತ್ತೀಚಿಗಷ್ಟೇ ಒಂದೇ ತಾಲ್ಲೂಕಿನಿಂದ ಒಂದೇ ಪರೀಕ್ಷಾ ಕೇಂದ್ರದಿಂದ ಕೆಪಿಎಸ್‌ಸಿ ನಡೆಸಿದ ಎಸ್‌ಡಿಎ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಆಗಿದೆ.
ಇಂತಹ ಅಕ್ರಮಗಳು ಮತ್ತು ಭ್ರಷ್ಟಾಚಾರ ಗಳು ಕೆಪಿಎಸ್ಸಿಯಲ್ಲಿ ಮೇಲಿಂದ ಮೇಲೆ ನಡೆಯು ತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವ ಯಾವುದೇ ಉಪಾಯಗಳನ್ನು ಕಂಡು ಹಿಡಿಯದ ಕೆಪಿಎಸ್‌ಸಿ ವಿರುದ್ಧ ಕರ್ನಾಟಕ ಹೈಕೋರ್ಟ್ ಕೂಡ ಕೆಂಡಕಾರಿದೆ. ಪದೇ ಪದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗು ವುದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೋಬಲ ಕುಗ್ಗಿ ಕೆಪಿಎಸ್‌ಸಿ ಮೇಲಿರುವ ಭರವಸೆಯನ್ನು ಕಳೆದುಕೊ ಳ್ಳುವಂತಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಆದ್ದರಿಂದ ಪ್ರಶ್ನೆ ಎಲ್ಲಿಂದ ಬಂತು, ಯಾರು ತಂದು ಕೊಟ್ಟಿದ್ದಾರೆ ಮತ್ತು ಈ ಜಾಲದ ಹಿಂದೆ ಇನ್ನೂ ಎಷ್ಟು ಕಾಣದ ಕೈಗಳು ಅಡಗಿವೆ ಎಂಬುದನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ಪರೀಕ್ಷೆಗಳಿಗೆ ಸಂಬಂಧಪಟ್ಟ ಅವ್ಯವಹಾರಗಳನ್ನು ನೋಡಿ ಕೊಳ್ಳಲು ಸರ್ಕಾರಕ್ಕೆ ಅಭಾವಿಪ ಆಗ್ರಹಿಸುತ್ತದೆ.