ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣ

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಭರವಸೆ

ದಾವಣಗೆರೆ, ಜ. 24- ನಗರದ ಆರ್.ಟಿ.ಓ. ಕಚೇರಿ ಬಳಿಯ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಡಾ.ಶಿವಕುಮಾರ ಸ್ವಾಮೀಜಿ ವೃತ್ತ ಯುವಕರ ಸಂಘ, ಡಾ.ಶಿವಕುಮಾರ ಸ್ವಾಮೀಜಿ ಸೇವಾ ಸಮಿತಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ದಿನ ಸಾರ್ವಜನಿಕರೇ ಈ ವೃತ್ತಕ್ಕೆ, ಶ್ರೀ ಶಿವಕುಮಾರ ಸ್ವಾಮಿ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಹಾಕಿದ್ದಾರೆ. 

ಅಧಿಕೃತವಾಗಿ ಹೆಸರಿಡುವಂತೆ ಮಹಾನಗರ ಪಾಲಿಕೆಗೂ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು. ಕೆಲವೇ ಜನರು ಶ್ರೀಗಳ ಹೆಸರಿನ ಬದಲಾಗಿ ಬೇರೆ ಹೆಸರಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ ಬೇರೆ ಹೆಸರನ್ನಿಡಲು ಬಿಡುವುದಿಲ್ಲ. ಈ ವೃತ್ತ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂದೇ ಆಗಬೇಕಿದೆ ಎಂದು ಹೇಳಿದರು.

ಶ್ರೀಗಳ ಪುತ್ಥಳಿ ನಿರ್ಮಾಣ: ಯಶವಂತರಾವ್ ಜಾಧವ್, ಎಸ್.ಟಿ. ವೀರೇಶ್ ಮುಂತಾದ ಸ್ನೇಹಿತರೊಂದಿಗೆ ಚರ್ಚಿಸಿ, ಈ ವೃತ್ತದಲ್ಲಿ  ಶ್ರೀ ಶಿವಕುಮಾರ ಸ್ವಾಮೀಜಿಯವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಶಂಕರ್, ಘನರಾಜ್, ಕಾಡು ಮಂಜು, ಶಿಕ್ಷಕ ಆಂಜನೇಯ ಇತರರು ಉಪಸ್ಥಿತರಿದ್ದರು.

error: Content is protected !!