ದಾವಣಗೆರೆ, ಜ. 20- ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಕಿವಿಗೊಡದೆ ಘೋಷಣೆ ಮಾಡಿದಂತೆ ಶೀಘ್ರವೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಹಾಗೂ ಮರಾಠಿಗರಿಗೆ 3ಬಿ ಬದಲಾಗಿ 2ಎ ಮೀಸಲಾತಿ ನೀಡಬೇಕು ಎಂದು ಮರಾಠ ಮೀಸಲಾತಿ ಅಭಿಯಾನದ ರಾಜ್ಯಾಧ್ಯಕ್ಷ ವಿಜೇಂದ್ರ ರಾವ್ ಜಾಧವ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9ನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪನವರು ರಾಜ್ಯಾದ್ಯಂತ ಪ್ರವಾಸ ಮಾಡಿ ಮರಾಠಿಗರ ಸ್ಥಿತಿ-ಗತಿ ಅರಿತು, ಹಿಂದುಳಿದ 2ಎ ಗೆ ಸೇರಿ ಸಲು ಶಿಫಾರಸ್ಸು ಮಾಡಿದ್ದರೂ ಸರ್ಕಾರ ಇನ್ನೂ ಸೇರಿಸಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಮರಾಠ ಪ್ರಾಧಿಕಾರ ವಿರೋಧಿಸುವ ವಾಟಾಳ್ ನಾಗರಾಜ್, ಪ್ರಾಧಿಕಾರ ರಚನೆಯಿಂದ ಕನ್ನಡ ನಾಡಿಗೆ ಯಾವ ರೀತಿ ಅನ್ಯಾಯವಾಗುತ್ತದೆ ಎಂಬುದನ್ನು ಅಂಕಿ-ಅಂಶಗಳ ಸಹಿತ ಸ್ಪಷ್ಟೀಕರಿಸಲಿ ಎಂದರು.
ದೇಶದ ಐಕ್ಯತೆಯನ್ನು ಕಾಪಾಡಿದ ಛತ್ರಪತಿ ಶಿವಾಜಿ ವಂಶಸ್ಥರು ಮರಾಠಿಗರು. ವಿಭಿನ್ನತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದ್ದೇವೆ. ನಮ್ಮನ್ನು ನಾಡ ದ್ರೋಹಿಗಳು ಎಂದು ಕರೆಯಲು ಯಾವ ನೈತಿಕತೆಯೂ ಇಲ್ಲ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರೂ ಆದ ಯಶವಂತ ರಾವ್ ಜಾಧವ್ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ನಂತರ ಘೋಷಣೆಯಾದ ಬೇರೆ ಬೇರೆ ನಿಗಮಗಳಿಗೆ ಈಗಾಗಲೇ ಹಣ ಬಿಡುಗಡೆಯಾಗಿ, ಅಧ್ಯಕ್ಷರ ನೇಮಕವಾಗಿ ಕಾರ್ಯರೂಪಕ್ಕೆ ಬಂದಿವೆ. ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೂ ಮುಖ್ಯ ಮಂತ್ರಿಗಳು ಚಾಲನೆ ನೀಡಬೇಕು ಎಂದರು. ಮರಾಠರು ಎಂದಿಗೂ ಜಾತಿ ಹಾಗೂ ಪ್ರಾಂತ್ಯಕ್ಕಾಗಿ ಹೋರಾಡಿದ ವರಲ್ಲ. ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ, ಭಾರತದ ಹಿಂದೂಗಳ ಸುರಕ್ಷತೆಗಾಗಿ ಹೋರಾಡಿದವರು. ನಾವೂ ಸಹ ಕನ್ನಡಿಗರೇ. ಆದ್ದರಿಂದ ಮರಾಠ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ನಳಿನಿ ಪವಾರ್, ಭವಾನಿರಾವ್, ಪರಶುರಾಮ್, ರಾಕೇಶ್ ಭಜರಂಗಿ ಹಾಗು ಇತರರು ಉಪಸ್ಥಿತರಿದ್ದರು.