ಲೆದರ್ ಬಾಲ್‌ ಕ್ರಿಕೆಟ್ : 4 ತಂಡಗಳು ಸೆಮಿಫೈನಲ್ಸ್‌ಗೆ

ದಾವಣಗೆರೆ, ಜ.18- ನಗರದ ಮಯೂರ ಕ್ರಿಕೆಟ್ ಕ್ಲಬ್ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿರುವ 16 ವರ್ಷದ ಒಳಗಿನ ಬಾಲಕರ ಲೆದರ್ ಬಾಲ್‌ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ.

ದಾವಣಗೆರೆ ಕ್ರಿಕೆಟ್ ಅಕಾಡೆಮಿ, ದಾವಣಗೆರೆ ಯುನೈಟೆಡ್ ಕ್ರಿಕೆಟ್ ಅಕಾಡೆಮಿ, ಚಿತ್ರದುರ್ಗ ದ ಮದಕರಿ ಕ್ರಿಕೆಟ್ ಅಕಾಡೆಮಿ ಮತ್ತು ಬಳ್ಳಾರಿಯ ಡಾ.ಮಸ್ತಿಕರ್ ಕ್ರಿಕೆಟ್ ಅಕಾಡೆಮಿ ತಂಡಗಳು ಪ್ರಬಲ ಪೈಪೋಟಿಯ ನಡುವೆಯೂ ಲೀಗ್ ಹಂತದ ಪಂದ್ಯಗಳನ್ನು ಜಯಿಸಿ ಮಂಗಳವಾರದಿಂದ ಆರಂಭಗೊಳ್ಳಲಿರುವ ಸೆಮಿಫೈನಲ್ಸ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಕಳಪೆ‌ ಪ್ರದರ್ಶನ ತೋರಿದ ದಾವಣಗೆರೆ ವೀನಸ್ ಅಕಾಡೆಮಿ ಮತ್ತು ತುಮಕೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಸೋಮವಾರ ನಡೆದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟಿಂಗ್ ಮಾಡಿದ ದಾವಣಗೆರೆ ಯುನೈಟೆಡ್ ಹುಡುಗರು ನಿಗದಿತ 25 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಕಲೆ ಹಾಕಿದರು. ಆದರ್ಶ ಪಾಟೀಲ್ 69 ರನ್ ಗಳ ಉತ್ತಮ ಕಾಣಿಕೆ ನೀಡಿದರು.

ಈ ಸಾಧಾರಣ ಮೊತ್ತ ಬೆನ್ನತ್ತಿದ ಮಸ್ತಿಕರ್ ಬಾಯ್ಸ್ ಇನ್ನೂ7 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಗಳ‌ ನಷ್ಟಕ್ಕೆ 132 ರನ್ ಗಳಿಸಿ  ಸೆಮಿಫೈನಲ್ಸ್ ಹಾದಿ ಸುಗಮ ಮಾಡಿಕೊಂಡಿತು. ಲಕ್ಷ್ಮಿ ಸಾಗರ್ ಬಾರಿಸಿದ 80 ರನ್ನುಗಳು ಮಸ್ತಿಕರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ಮತ್ತು ತುಮಕೂರು ಅಕಾಡೆಮಿ ತಂಡಗಳ ನಡುವೆ ನಡೆದ ಎರಡನೇ ಪಂದ್ಯದಲ್ಲಿ ದಾವಣಗೆರೆ ಹುಡುಗರು ನಿಗದಿತ 25 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದರು. ಈ ಸಾಧಾರಣ ಮೊತ್ತ ಬೆನ್ನತ್ತಿದ  ತುಮಕೂರು ತಂಡ 25 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 128 ರನ್ ಗಳಿಸುವ ಮೂಲಕ ಕೇವಲ 2 ರನ್ನುಗಳ ಅಂತರದಿಂದ ಸೋತು ಸೆಮಿಫೈನಲ್ಸ್ ಆಸೆಯನ್ನು ಕೈ ಚೆಲ್ಲಿತು.

ತುಮಕೂರು ಪರವಾಗಿ ಜೀವನ್‌ಜೈನ್ 53 ರನ್ ಕಾಣಿಕೆ ನೀಡಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ದಾವಣಗೆರೆ ಪರ ವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ವೆಂಕ ಟೇಶ್ ನೇಕಾರ್ 5 ಓವರ್ ಗಳಲ್ಲಿ 20 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರು. ಈ ಮೂಲಕ ದಾವಣಗೆರೆ ಕ್ರಿಕೆಟ್ ಅಕಾಡೆಮಿ  8 ಅಂಕಗಳೊಂ ದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಈ ಸೋಲಿನೊಂದಿಗೆ ತುಮಕೂರು ತಂಡ ಟೂರ್ನಿಯಿಂದ ಹೊರ ಬಿದ್ದಿತು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ 8 ಅಂಕ ಗಳೊಂದಿಗೆ ಮೊದಲ ಸ್ಥಾನದಲ್ಲಿ, ಚಿತ್ರದುರ್ಗದ ಮದಕರಿ ಅಕಾಡೆಮಿ 7 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿ, ದಾವಣಗೆರೆ ಯುನೈಟೆಡ್ ಅಕಾಡೆಮಿ 6 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿ ಮತ್ತು ಬಳ್ಳಾರಿಯ ಡಾ.ಮಸ್ತಿಕರ್ ಅಕಾಡೆಮಿ 5 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿವೆ.

ಮಂಗಳವಾರ ಇಂದಿನಿಂದ ಬಾಪೂಜಿ ಎಂಬಿಎ ಟರ್ಫ್ ಅಂಗಳದಲ್ಲಿ ಮೊದಲ ಸೆಮಿಫೈನಲ್ಸ್ ಪಂದ್ಯ ದಾವಣಗೆರೆ ಕ್ರಿಕೆಟ್ ಅಕಾಡೆಮಿ ಮತ್ತು ಬಳ್ಳಾರಿಯ ಡಾ.ಮಸ್ತಿಕರ್ ಅಕಾಡೆಮಿ ನಡುವೆ ಮತ್ತು ಎರಡನೇ ಸೆಮಿಫೈನಲ್ಸ್ ಪಂದ್ಯ ದಾವಣಗೆರೆ ಯುನೈಟೆಡ್ ಅಕಾಡೆಮಿ ಹಾಗೂ ಚಿತ್ರದುರ್ಗದ ಮದಕರಿ ಅಕಾಡೆಮಿ ತಂಡಗಳ ನಡುವೆ ನಡೆಯಲಿದೆ ಎಂದು ಟೂರ್ನಿಯ ಆಯೋಜಕರಾದ ದಿನೇಶ್ ಕೆ. ಶೆಟ್ಟಿ, ಹುಚ್ಚವ್ವನಹಳ್ಳಿ ಮಂಜುನಾಥ್, ಎಲ್. ಪ್ರಕಾಶ್, ಬಸವರಾಜ್ ತಿಳಿಸಿದ್ದಾರೆ.

error: Content is protected !!