ಮಕ್ಕಳ ಕಳೆದುಕೊಂಡವರಿಗೆ ಅವಲಂಬನೆ ಪರಿಹಾರ: ಹೈಕೋರ್ಟ್‌

ನವದೆಹಲಿ, ಜ. 17 – ಪೋಷಕರು ತಮ್ಮ ಜೀವನದ ಒಂದಲ್ಲಾ ಒಂದು ಹಂತದಲ್ಲಿ ಮಕ್ಕಳನ್ನು ಅವಲಂಬಿಸು ತ್ತಾರೆ. ಹೀಗಾಗಿ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಈ ನಷ್ಟಕ್ಕಾಗಿ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಅಪಘಾತದ ಸಮಯದಲ್ಲಿ ಪೋಷಕರು ಮಕ್ಕಳನ್ನು ಅವಲಂಬಿಸಿರದೇ ಇದ್ದರೂ ಸಹ, ನಂತರದ ದಿನಗಳಲ್ಲಿ ಹಣಕಾಸು ಹಾಗೂ ಭಾವನಾತ್ಮಕವಾಗಿ ಅವಲಂಬಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರ ನೇತೃತ್ವದ ಪೀಠ ಹೇಳಿದೆ. 2008ರಲ್ಲಿ ಮಹಿಳೆಯೊಬ್ಬರು ತಮ್ಮ 23 ವರ್ಷದ ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು. 

ಆದರೆ, ಮಗನನ್ನು ಕಳೆದು ಕೊಂಡ ಪೋಷಕರಿಗೆ ಅವಲಂಬನೆಯನ್ನು ಕಳೆದುಕೊಂಡ ಪರಿಹಾರ ನೀಡಲಾಗದು ಎಂದು ಮೋಟಾರು ವಾಹನ ಅಪಘಾತಗಳ ಕ್ಲೇಮುಗಳ ಟ್ರಿಬ್ಯೂನಲ್ ತಿಳಿಸಿತ್ತು.

ಮೃತನ ತಂದೆ ದೆಹಲಿ ಪೊಲೀಸರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ತಂದೆಗೆ ಪರಿಹಾರ ನೀಡಲಾಗದು. ತಾಯಿ ತನ್ನ ಪತಿಯನ್ನು ಅವಲಂಬಿಸಿರುವುದರಿಂದ ಅವರಿಗೂ ಪರಿಹಾರ ನೀಡಲಾಗದು ಎಂದು ಟ್ರಿಬ್ಯೂನಲ್ ತಿಳಿಸಿ, ಕೇವಲ ಘನತೆ ನಷ್ಟವಾಗಿರುವುದಕ್ಕೆ ಪರಿಹಾರ ನೀಡಿತ್ತು. 

ಆದರೆ, ಈ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್, ವೃದ್ಧಾಪ್ಯದಲ್ಲಿ ಪೋಷಕರು ಮಕ್ಕಳನ್ನು ಅವಲಂಬಿಸುತ್ತಾರೆ. ಆ ಹಂತದಲ್ಲಿ ಪೋಷಕರು ತಮ್ಮ ನಿರ್ವಹಣೆ ಮಾಡಿಕೊಳ್ಳಲಾಗದು ಎಂದು ಹೇಳಿದೆ. ಹೈಕೋರ್ಟ್ ಪರಿಹಾರದ ಮೊತ್ತವನ್ನು 2.42 ಲಕ್ಷ ರೂ.ಗಳಿಂದ 6.80 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.

ಹಿಂದೂ ದತ್ತು ಹಾಗೂ ನಿರ್ವಹಣೆ ಕಾಯ್ದೆ ಹಾಗೂ ಹಿರಿಯ ನಾಗರಿಕರ ಕಾಯ್ದೆಗಳ ಅನ್ವಯ ಪೋಷಕರ ಪಾಲನೆ ಮಾಡುವುದು ಮಕ್ಕಳ ಕರ್ತವ್ಯ ಎಂಬುದನ್ನೂ  ಹೈಕೋರ್ಟ್ ಉಲ್ಲೇಖಿಸಿದೆ.

error: Content is protected !!