ಪ್ರಗತಿಪರ ಚಿಂತಕ ದಿನೇಶ್ ಅಮಿನ್ ಮಟ್ಟು
ದಾವಣಗೆರೆ, ಜ. 12- ತಮ್ಮ ಜೀವನದಲ್ಲಿನ ಕಡು ಬಡತನ, ಕಾಯಿಲೆ, ಅವಹೇಳನದ ಮಾತುಗಳ ನಡುವೆಯೂ ಎದೆಗುಂದದೆ ಇಡೀ ಜಗತ್ತಿನ ತತ್ವ ಶಾಸ್ತ್ರಗಳನ್ನು ಅರೆದು ಕುಡಿದು ಜಗತ್ತಿಗೆ ಮಹಾಗುರುವಾದ ಸ್ವಾಮಿ ವಿವೇಕಾನಂದ ಅವರು ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಎಂದು ಪ್ರಗತಿಪರ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.
ಎನ್.ಎಸ್.ಯು.ಐ. ಹಾಗೂ ಎ.ವಿ. ಕಮಲಮ್ಮ ಮಹಿಳಾ ಮಹಾವಿದ್ಯಾಲಯದ ಸಹ ಭಾಗಿತ್ವದಲ್ಲಿ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.
ಓರ್ವ ಸನ್ಯಾಸಿಯಾಗಿ ವಿವೇಕಾನಂದರು ದೇವರು, ಧರ್ಮದ ಬಗ್ಗೆ ಮಾತನಾಡದೆ ಬಡವರು, ರೋಗಿಗಳು, ನಿರ್ಗತಿಕರಲ್ಲಿ ದೇವರನ್ನು ಕಾಣಬೇಕೇ ಹೊರತು, ಹೊರಗಡೆ ಹುಡುಕಲು ಹೋಗಬಾರದು ಎಂದಿದ್ದರು. ಆದರೆ ಇಂದಿಗೂ ನಮ್ಮ ದೇಶವನ್ನು ಹಸಿವು, ಅನಕ್ಷರತೆ, ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿವೆ ಎಂದರು.
ನಾವು ಯಾವ ಜಾತಿ, ಧರ್ಮಕ್ಕೆ ಸೇರಿದ್ದೇ ವೆಂದು ಮರೆತು, ನಾವು ಕೇವಲ ಮನುಷ್ಯರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವ ಜೊತೆಗೆ, ಸ್ವಾಮಿ ವಿವೇಕಾನಂದರು ಯಾವ ಜಾತಿ, ಧರ್ಮ ಎಂಬುದನ್ನೂ ಮರೆತು, `ಇಡೀ ಮನುಕುಲದ ಬಗ್ಗೆ ಮಾತನಾಡಿದ ಓರ್ವ ಆದರ್ಶ ಪುರುಷ’ ಎಂದು ತಿಳಿದು ವಿವೇಕಾನಂದರ ಬಗ್ಗೆ ಓದಿದರೆ ಮಾತ್ರ ಅವರು ಅರ್ಥವಾಗುತ್ತಾರೆ. ಜೊತೆಗೆ ನಮ್ಮ ಬದುಕಿನ ದಾರಿಗೆ ಬೆಳಕಾಗುತ್ತಾರೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು ಅವರುಗಳು ಹೇಳಿದ ಚಿಂತನೆಗನುಗುಣವಾಗಿ ಹಿಂದೂ ಧರ್ಮವನ್ನು ಸುಧಾರಣೆಗೊಳಪಡಿಸಿದ್ದರೆ ಹಿಂದೂ ಧರ್ಮ ಕೇವಲ ಭಾರತ ಹಾಗೂ ಅರ್ಧ ನೇಪಾಳಕ್ಕಷ್ಟೇ ಸೀಮಿತವಾಗದೆ ಜಗತ್ತಿನಾದ್ಯಂತ ವ್ಯಾಪಿಸುತ್ತಿತ್ತು ಎಂದು ಅಭಿಪ್ರಾಯಿಸಿದರು.
ಹಿಂದೂ ಧರ್ಮದ ಹುಳುಕುಗಳ ಬಗ್ಗೆಯೇ ಸ್ವಾಮಿ ವಿವೇಕಾನಂದರು ಮಾತನಾಡಿದ್ದರು. ಆದರೆ ಇಂದು ಹಿಂದೂ ಧರ್ಮದ ಬಗ್ಗೆ ಮಾತನಾಡಿ ಧರ್ಮ ದ್ರೋಹಿ ಎಂದು ಹೇಳಲಾಗುತ್ತಿದೆ. ಧರ್ಮವನ್ನು ತಾಯಿ ಎಂದು ತಿಳಿದವರು ಧರ್ಮದ ಹುಳುಕು ಪ್ರಶ್ನಿಸಿದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಹಿಂದೂ ಧರ್ಮ ಹರಿಯುವ ನೀರಿನಂತಿ ರಬೇಕು. ವಿವೇಕಾನಂದರು ಸೇರಿದಂತೆ ಕೆಲ ಮಹಾನ್ ಪುರುಷರು ಕಾಲ ಕಾಲಕ್ಕೆ ಧರ್ಮದಲ್ಲಿನ ಕೊಳೆಯನ್ನು ತೊಳೆದು ಶುದ್ಧ ಮಾಡಿದ್ದಾರೆ. ಇಲ್ಲದಿದ್ದರೆ ಹಿಂದೂ ಧರ್ಮ ಎಲ್ಲಿಯೋ ಕಳೆದು ಹೋಗುತ್ತಿತ್ತು ಎಂದರು.
ಎ.ವಿ. ಕಮಲಮ್ಮ ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎ.ಬಿ. ಶಿವನಗೌಡ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ವಕೀಲ ಅನಂತನಾಯ್ಕ, ಪಾಲಿಕೆ ಸದಸ್ಯ ಚಮನ್ ಸಾಬ್ ಉಪಸ್ಥಿತರಿದ್ದರು.