ಕೂಡ್ಲಿಗಿ, ಜ.12- ತಾಲ್ಲೂಕಿನ ನಾಗಲಾಪುರ ಗ್ರಾಮದಲ್ಲಿ ಬಳ್ಳಾರಿ ಅರಣ್ಯ ವಿಭಾಗ, ಕೂಡ್ಲಿಗಿ ಉಪವಿಭಾಗದಿಂದ ಆಯೋಜಿಸಲಾಗಿದ್ದ ಅರಣ್ಯ ಮತ್ತು ವನ್ಯಜೀವಿ ಸಂಕುಲವನ್ನು ಕಾಡ್ಗಿಚ್ಚಿನಿಂದ ರಕ್ಷಿಸುವುದು ಹಾಗೂ ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷ ತಡೆಗಟ್ಟುವ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಹಾವು ಮತ್ತು ನಾನು ಸಂಸ್ಥೆಯ ವಿಪಿನ್ರಾಯ್ ಮಾತನಾಡಿ, ವನ್ಯಜೀವಿಗಳಿಗೂ ಮನುಷ್ಯನಂತೆ ಬದುಕಲು ಹಕ್ಕಿದೆ ಎಂದರಲ್ಲದೆ, ಪ್ರಾಣಿಗಳು ಬದುಕಲು ಕಾಡುಗಳಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು. ಸಂಸ್ಥೆಯ ಸ್ಫೂರ್ತಿ ಮಾತನಾಡಿ, ಹಾವು ಕಡಿತ ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳು, ಚಿಕಿತ್ಸೆ ಕುರಿತು ತಿಳಿಸಿಕೊಟ್ಟರು.
ಕೂಡ್ಲಿಗಿ ವಲಯ ಅರಣ್ಯದ ವ್ಯಾಪ್ತಿಗೆ ಬರುವ ಕಾಡಿನಂಚಿನಲ್ಲಿರುವ ಗ್ರಾಮಗಳಾದ ಬಂಡ್ರಿ, ನಾಗಲಾಪುರ, ಪಾಲಯ್ಯನಕೋಟೆ, ಸುಂಕದಕಲ್ಲು, ಜರ್ಮಲಿಯಲ್ಲಿ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕೂಡ್ಲಿಗಿ ಮತ್ತು ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಾ, ಕೂಡ್ಲಿಗಿ ಉಪ ಅರಣ್ಯಾಧಿಕಾರಿ ಕುಬೇರ, ಅರಣ್ಯ ರಕ್ಷಕರಾದ ನಾಗರಾಜ್, ಗೋವಿಂದಪ್ಪ, ಪ್ರಶಾಂತ್ ಯಾದವ್, ಗಂಗಾಧರ್, ಅರಣ್ಯ ವೀಕ್ಷಕ ನಾಗರಾಜ, ಪಂಪಯ್ಯ, ಗಣೇಶ್ ಹಾಗೂ ಇನ್ನಿತರರಿದ್ದರು.