ಜ್ಞಾನ ದ್ವೀಪವಾಗದೇ ಜನ ತಲುಪಲಿ

ವಿಜ್ಞಾನವನ್ನು ಮಾತೃಭಾಷೆಯಲ್ಲಿ ತಿಳಿಸಲು ಎಂ.ಜಿ. ಈಶ್ವರಪ್ಪ ಕರೆ

ದಾವಣಗೆರೆ, ಜ. 11 – ಜ್ಞಾನವು ದ್ವೀಪದಂತೆ ಜ್ಞಾನಿಗಳ ತಲೆಯಲ್ಲಿ ಉಳಿದುಕೊಳ್ಳದೇ ಜನಸಾಮಾನ್ಯರಿಗೆ ತಲುಪಬೇಕು. ಇದಕ್ಕಾಗಿ ಮಾತೃಭಾಷೆಯ ಮೂಲಕ ಸಂಹವನ ಮಾಡುವುದೇ ಸೂಕ್ತ ಎಂದು ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಡಿ.ಆರ್.ಎಂ. ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ವಿಜ್ಞಾನ ಕೇಂದ್ರ, ಯುವಸ್ಪಂದನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದಾವಣಗೆರೆ ವಿ.ವಿ. ಮಟ್ಟದ ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬುದ್ಧಿವಂತಿಕೆಯಿಂದ ದೊರೆಯುವ ಶಾಸ್ತ್ರ ದ್ವೀಪದಂತೆ ಒಬ್ಬರ ತಲೆಯಲ್ಲಿರಬಾರದು. ಇದರಿಂದ ಶಾಸ್ತ್ರಕ್ಕೆ ಹಾಗೂ ಶಾಸ್ತ್ರ ಕಲಿತವರಿಬ್ಬರಿಗೂ ಬೆಲೆ ಸಿಗುವುದಿಲ್ಲ. ಶಾಸ್ತ್ರ ಜನಸಾಮಾನ್ಯರ ಹತ್ತಿರವಾಗಲು ಜನಸಾಮಾನ್ಯರ ಭಾಷೆ ಬಳಸಬೇಕು ಎಂದವರು ಹೇಳಿದರು.

ಕೇಂದ್ರ ಸರ್ಕಾರ ಸಹ ನೂತನ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಯಿಂದಲೇ ಕಲಿಸಬೇಕು ಎಂದು ತಿಳಿಸಿದ ಈಶ್ವರಪ್ಪ, ಕನ್ನಡದಲ್ಲಿ ಬಳಸುವ ಪದಗಳೂ ಸರಳವಾಗಿರಬೇಕು. ಆರಕ್ಷಕ – ಅಭಿಯಂತರ ಎಂಬ ಪದಗಳಿಗಿಂತ ಪೊಲೀಸ್ ಹಾಗೂ ಇಂಜಿನಿಯರ್ ಎಂಬ ಪದಗಳ ಬಳಕೆಯೇ ಸೂಕ್ತ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಕನ್ನಡದಲ್ಲೇ ಕಲಿತು ಉನ್ನತ ಸಾಧನೆ ಮಾಡಿದ್ದಾರೆ. ಅವರು ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಅವರಂತೆಯೇ ವಿದ್ಯಾರ್ಥಿಗಳೂ ವಿಜ್ಞಾನ ಜನಪ್ರಿಯಗೊಳಿಬೇಕೆಂದು ಕರೆ ನೀಡಿದರು.

ಉಪನ್ಯಾಸ ಸ್ಪರ್ಧೆಯ ರಾಜ್ಯ ಸಂಯೋಜಕ ಹೆಚ್.ಎಸ್.ಟಿ. ಸ್ವಾಮಿ ಮಾತನಾಡಿ, ದೊಡ್ಡ ವಿಷಯಗಳ ಬದಲು ಮನೆ ಮನೆಯಲ್ಲಿ ಕಂಡು ಬರುವ ರಾಸಾಯನಿಕ, ಗ್ರಹಣ ಮುಂತಾದ ವಿಷಯಗಳ ಬಗ್ಗೆ ಹೇಳುವುದರಿಂದ ಹೆಚ್ಚು ಜನರಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸ ಸ್ಪರ್ಧೆಯ ಸಂಚಾಲಕ ಅಂಗಡಿ ಸಂಗಪ್ಪ, 12 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕನ್ನಡದಲ್ಲೂ ವಿಜ್ಞಾನ ಸಂವಹನವನ್ನು ಸರಳವಾಗಿ ನಡೆಸಲು ಸಾಧ್ಯ ಎಂಬುದನ್ನು ಈ ಕಾರ್ಯಕ್ರಮ ತೋರಿಸುತ್ತಿದೆ ಎಂದರು.

ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಂಕನ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿದರು. ಡಿ.ಆರ್.ಎಂ. ಪ್ರಾಂಶುಪಾಲೆ ಡಾ. ಆರ್. ವನಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕಿ ಮಂಗಳಗೌರಿ ಪ್ರಾರ್ಥಿಸಿದರು. ಕರ್ನಾಟಕ ವಿಜ್ಞಾನ ಪರಿಷತ್ತಿನ ನಿಕಟಪೂರ್ವ ಕಾರ್ಯ ದರ್ಶಿ ಎಂ. ಗುರುಸಿದ್ದಸ್ವಾಮಿ ಸ್ವಾಗತಿಸಿದರು.

error: Content is protected !!