ಎಸ್ಸೆಸ್ ಅವರಿಗೆ ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯತ್ವ

ದಾವಣಗೆರೆ,ಜ.10-  ಪ್ರತಿಷ್ಠಿತ ಸಾಮಾಜಿಕ ಸೇವಾ ಸಂಸ್ಥೆ ದಾವಣಗೆರೆ ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯರನ್ನಾಗಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಐವತ್ತೆರಡು ವರ್ಷಾಚರಣೆಯಲ್ಲಿರುವ ದಾವಣಗೆರೆ ಲಯನ್ಸ್ ಕ್ಲಬ್ಬಿನ ಕಾರ್ಯ ನಿರ್ವಾಹಕ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ, ಸ್ಥಾಪಕ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಎಸ್ಸೆಸ್ ಅವರಿಗೆ ಗೌರವ ಸದಸ್ಯತ್ವ ನೀಡಲಾಗಿದೆ. 

ಈ ಹಿನ್ನೆಲೆಯಲ್ಲಿ ಎಸ್ಸೆಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಜಿಲ್ಲಾ ಲಯನ್ಸ್ 317 ಸಿ ರಾಜ್ಯಪಾಲ ಎನ್.ಎಂ. ಹೆಗಡೆ ಅವರು ಶಿವಶಂಕರಪ್ಪ ಅವರಿಗೆ ಸಂಸ್ಥೆಯ ವಿಶೇಷ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡುವುದರ ಮೂಲಕ ಗೌರವ ಸದಸ್ಯರನ್ನಾಗಿ ಲಯನ್ಸ್ ಕ್ಲಬ್ಬಿಗೆ ಬರ ಮಾಡಿಕೊಂಡರು.

ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯತ್ವ ಪಡೆದ ಎಸ್ಸೆಸ್, 52 ವರ್ಷಗಳ ಹಿಂದೆ ತಾವು ತಮ್ಮ ಮಿತ್ರರೊಂದಿಗೆ ಸೇರಿ ಲಯನ್ಸ್ ಕ್ಲಬ್ಬನ್ನು ದಾವಣಗೆರೆಯಲ್ಲಿ ಸ್ಥಾಪಿಸಿದ್ದನ್ನು ಮೆಲುಕು ಹಾಕಿದರಲ್ಲದೇ, ಅಂದಿನ ಪದಾಧಿಕಾರಿಗಳು ಮತ್ತು ನಡೆಸಿದ ಸಾಮಾಜಿಕ ಸೇವೆಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲರೂ, ದಾವಣಗೆರೆ ಲಯನ್ಸ್ ಟ್ರಸ್ಟ್ ಛೇರ್ಮನ್ನರೂ ಆಗಿರುವ ಹಿರಿಯ ವೈದ್ಯ ಡಾ. ಬಿ.ಎಸ್. ನಾಗಪ್ರಕಾಶ್, ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರೊಬ್ಬರಿಗೆ ಲಯನ್ಸ್ ಸಂಸ್ಥೆಯಲ್ಲಿ ಗೌರವ ಸದಸ್ಯತ್ವ ನೀಡುವುದರ ಮೂಲಕ ಅವರಿಗೆ ಗೌರವ ನೀಡುವ ಪ್ರತೀತಿ ಇದ್ದು, ಈ ಹಿನ್ನೆಲೆಯಲ್ಲಿ ಎಸ್ಸೆಸ್ ಅವರಿಗೆ ಆ ಗೌರವ ನೀಡಿರುವುದಾಗಿ ತಿಳಿಸಿದರು.

ಹಿರಿಯ ನೇತ್ರ ತಜ್ಞರಾಗಿದ್ದ ಡಾ. ಎಂ.ಸಿ. ಮೋದಿ ಅವರು ಈವರೆಗೂ ದಾವಣಗೆರೆ ಲಯನ್ಸ್ ಕ್ಲಬ್ಬಿನಲ್ಲಿ ಗೌರವ ಸದಸ್ಯರಾಗಿದ್ದರು. ಅವರ ನಿಧನದಿಂದಾಗಿ ಕೆಲ ವರ್ಷಗಳಿಂದ ತೆರವಾದ ಸ್ಥಾನಕ್ಕೆ ಎಸ್ಸೆಸ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಡಾ. ನಾಗಪ್ರಕಾಶ್ ಹೇಳಿದರು.

ಲಯನ್ಸ್ ಕ್ಲಬ್ ಇರುವ ಊರುಗಳಲ್ಲಿ ಆಯಾ ಭಾಗದ ಗಣ್ಯರೊಬ್ಬರಿಗೆ ಗೌರವ ಸದಸ್ಯತ್ವ ನೀಡಲಾಗುತ್ತಿದೆ. ಅದರಂತೆ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆ, ಕ್ರಿಕೆಟ್ ತಾರೆಗಳಾದ ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮತ್ತಿತರೆ ಗಣ್ಯರಿಗೆ ಲಯನ್ಸ್ ನ ಗೌರವ ಸದಸ್ಯತ್ವ ನೀಡಲಾಗಿದೆ ಎಂದು ಅವರು ವಿವರಿಸಿದರು. 

ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಂ. ವಿಜಯಕುಮಾರ್, ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಚಿ ಸಂಪತ್ ಬಿ. ಹಳ್ಳಿಕೇರಿ, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್, ಛೇರ್ಮನ್ ದಿನೇಶ್ ಕೆ.ಶೆಟ್ಟಿ, ನಿರ್ದೇಶಕ ಎಂ.ಎಸ್. ಉದಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!