‘ಸನಾತನ ಪ್ರಗತಿಪರ’ ಈ ನೆಲದಲ್ಲಿ ನಿರಂತರ

ಸನಾತನಿಗಳು ಪ್ರಗತಿಪರರಾಗಲು ಸಾಧ್ಯವಿಲ್ಲ ಎಂಬುದು ಹುಸಿ ವಾದ

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿ ರುವ ನೂತನ ಅನುಭವ ಮಂಟಪದ ಜಾಹೀರಾತಿನಲ್ಲಿ ‘ಸನಾತನ’ ಎಂಬ ಪದದ ಬಳಕೆಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಎಂದು ಜಾಹೀರಾತುಗಳಲ್ಲಿ ಹೇಳಿರುವುದರ ಬದಲು ಶರಣರ ಚಿಂತನೆಯ ಮರುಸೃಷ್ಟಿ ಎಂದಾಗಬೇಕಿತ್ತು ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದ್ದಾರೆ.

ಸನಾತನ ಧರ್ಮ ಎಂಬುದು ಹಿಂದೂ ಧರ್ಮವನ್ನು ಸೂಚಿಸುವಂಥದ್ದಾಗಿದೆ. ಹಿಂದೂ ಪದ ಬಳಕೆಗೆ ಶತಮಾನಗಳ ಮುಂಚೆಯಿಂದ ಸನಾತನ ಧರ್ಮ ಎಂಬ ಹೆಸರಿದೆ. ಸನಾತನ ಧರ್ಮ ಎಂಬ ಅಕ್ಷರಶಃ ಅರ್ಥ ಶಾಶ್ವತ ಧರ್ಮ ಎಂದಾಗಿದೆ.

ಬಸವಾದಿ ಶರಣರು ಸನಾತನ ಧರ್ಮಕ್ಕೆ ವಿರುದ್ಧವಾಗಿದ್ದ ಕಾರಣ, ನೂತನ ಅನುಭವ ಮಂಟಪದ ಜಾಹೀರಾತಿನಲ್ಲಿ ಸನಾತನ ಪದ ಇರಬಾರದಿತ್ತು ಎಂಬುದು ಕೆಲವರ ಅಭಿಪ್ರಾಯ. ಆದರೆ, ಸನಾತನ ಧರ್ಮ 12ನೇ ಶತಮಾನದಲ್ಲಿ ಶರಣರ ವಚನಗಳಿಗೆ ವಿರುದ್ಧವಾಗಿದ್ದ ರೀತಿಯಲ್ಲೇ 21ನೇ ಶತಮಾನದಲ್ಲೂ ಇದೆಯೇ? ಈ ಬಗ್ಗೆ ಗಹನವಾಗಿ ಪರಿಶೀಲಿಸಬೇಕಿದೆ.

12ನೇ ಶತಮಾನದಲ್ಲಿ ಮನುವಾದ ಇದ್ದರೆ, 21ನೇ ಶತಮಾನದಲ್ಲಿ ದಲಿತ ಸೂರ್ಯ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ವಾದವಿದೆ. ಅಂಬೇ ಡ್ಕರ್ ಅವರನ್ನೇ ಆಧುನಿಕ ಮನು ಎಂದು ಸನಾತನಿಗಳು ಸ್ವೀಕರಿಸಿದ್ದಾರೆ. ದಲಿತರನ್ನು ದೂರವಿಡುವುದು 12ನೇ ಶತಮಾನವಾಗಿದ್ದರೆ, 21ನೇ ಶತಮಾನದಲ್ಲಿ ಸನಾತನ ಧರ್ಮವನ್ನು ವೈಭವೀಕರಿಸುವ ಪಕ್ಷದ ದಲಿತರೊಬ್ಬರು ರಾಷ್ಟ್ರಪತಿಯಾಗಿದ್ದಾರೆ.

ಸನಾತನ ಧರ್ಮವನ್ನು ಹೆಮ್ಮೆಯಿಂದ ಪಾಲಿಸುವ ಪ್ರಧಾನ ಮಂತ್ರಿಯೇ ಹತ್ತು ಹಲವು ಬಾರಿ ಬಸವೇಶ್ವರ, ಅನುಭವ ಮಂಟಪ ಹಾಗೂ ಶರಣರನ್ನು ಸ್ಮರಿಸಿದ್ದಾರೆ. ನೂತನ ಸಂಸತ್ ಭವನದ ನಿರ್ಮಾಣದ ಸಮಯದಲ್ಲೂ ಪ್ರಧಾನಿ ಅಚ್ಚ ಕನ್ನಡದಲ್ಲಿ ಅನುಭವ ಮಂಟಪದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

ರಾಜ್ಯದ ವಿಷಯಕ್ಕೆ ಬಂದಾಗ ಸನಾತನಿಗಳೇ ಲಿಂಗಾಯತ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುವುದನ್ನು ಬೆಂಬಲಿಸಿದ್ದಾರೆ.

ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಹಿಂದೂ ಮಹಿಳೆಯರಿಗೆ ಪೂರ್ವಿಕರ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ತೀರ್ಪು ನೀಡಿದಾಗ ಸನಾತನಿಗಳು ಒಂದು ಮಾತಿನ ವಿರೋಧವಿಲ್ಲದೇ ಸ್ವೀಕರಿಸಿದ್ದಾರೆ. ಆದರೆ, ಇದೇ ಹಕ್ಕು ಅನ್ಯ ಕೆಲ ಧರ್ಮೀಯರ ಮಹಿಳೆಯರಿಗೆ ಇನ್ನೂ ದೊರೆತಿಲ್ಲ.

ಜಾತೀಯತೆಯ ವಿಷಯದಲ್ಲೂ ಸನಾತನಿಗಳನ್ನು ಟೀಕಿಸಲಾಗುತ್ತಿದೆ. 12ನೇ ಶತಮಾನದಲ್ಲಿ ರಾಜ್ಯದ ಸಂಪನ್ಮೂಲಗಳಲ್ಲಿ  ದಲಿತರಿಗೆ ಹಕ್ಕಿರಲಿಲ್ಲ. ಆದರೆ, 21ನೇ ಶತಮಾನದಲ್ಲಿ ದಲಿತರಿಗೆ ಶಾಸನಾತ್ಮಕವಾಗಿ ಸಂಪನ್ಮೂಲಗಳಲ್ಲಿ ಎಸ್‌ಸಿಪಿ – ಟಿಎಸ್‌ಪಿ ಮೂಲಕ ಮೊದಲ ಆದ್ಯತೆ ನೀಡಲಾಗಿದೆ. ಸನಾತನಿಗಳೂ ಇದನ್ನೆಂದೂ ವಿರೋಧಿಸಿಲ್ಲ. ಹಾಗೆ ನೋಡಿದರೆ ಎಸ್‌ಟಿ – ಎಸ್‌ಸಿಗೆ ಸೇರಿದರೆ ಎಷ್ಟೆಲ್ಲಾ ಸೌಲಭ್ಯಗಳಿವೆ ಎಂದು ಕೆಲ ಜಾತಿಯವರು ನಾವೂ ಹಿಂದುಳಿಯುತ್ತೇವೆ ಎಂದು ಬೆನ್ನತ್ತಿದ್ದಾರೆ!

ಜಾತಿ ಎಂಬುದು ಕೇವಲ ಸನಾತನ ಧರ್ಮಕ್ಕೆ ಸೀಮಿತವಲ್ಲ. ಅದೊಂದು ಭಾರತೀಯ ಉಪಖಂಡದ ಸಾಮಾಜಿಕ ವ್ಯವಸ್ಥೆ. ಉಪಖಂಡದಲ್ಲಿ ಜನಿಸಿದ ಧರ್ಮಗಳಷ್ಟೇ ಅಲ್ಲದೇ, ಹೊರಗಿನಿಂದ ಬಂದ ಧರ್ಮೀಯರಲ್ಲೂ ಜಾತಿಗಳು ಸೇರಿಕೊಂಡಿವೆ. ಇಷ್ಟಾದರೂ ಸನಾತನಿಗಳು ಮಾತ್ರ ಜಾತಿವಾದಿಗಳು ಎಂದು ಬಿಂಬಿಸುವುದು ತಪ್ಪು ದಾರಿಗೆಳೆಯುವ ಪ್ರಯತ್ನ.

ಸನಾತನಿಗಳು ಪ್ರಗತಿಪರರಾಗಲು ಸಾಧ್ಯವಿಲ್ಲ ಎಂಬುದು ಹುಸಿ ವಾದ. 21ನೇ ಶತಮಾನದಲ್ಲಿ ಸನಾತನಿಗಳು ಕಂಡಿರುವ ಅಭೂತಪೂರ್ವ ಬದಲಾವಣೆಯನ್ನು ಗಮನಿಸಿದಾಗ ಸನಾತನ ಪ್ರಗತಿಪರ ಎಂಬುದು ಅರ್ಥಹೀನವೇನೂ ಅಲ್ಲ. ಭಾರತವೆಂಬ ಭೂಮಿ ನೂರಾರು ಪ್ರಗತಿಪರರು, ಕ್ರಾಂತಿಕಾರಿಗಳು, ಸುಧಾರಣಾವಾದಿಗಳ ಕಾರಣದಿಂದಾಗಿ ನಿರಂತರವಾಗಿ ಬದಲಾಗುತ್ತಾ ಬಂದಿದೆ. ಮುಂದೆಯೂ ಬದಲಾಗಲಿದೆ. ಈ ದೃಷ್ಟಿಯಿಂದ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಈ ದೇಶದಲ್ಲಿ ಮೊದಲ ಬಾರಿ ಯೇನೂ ನಡೆದಿಲ್ಲ. ಇದಕ್ಕೆ ಕೊನೆಯೂ ಇಲ್ಲ.


– ಅಸ್ಮಿತ ಶೆಟ್ಟರ್‌,
[email protected]

error: Content is protected !!