ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಧರಣಿ

ದಾವಣಗೆರೆ, ಜ.8- ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರ ಪಾಲಿಕೆ ಮುಂಭಾಗದಲ್ಲಿ ಧರಣಿ ಹೂಡಿದ್ದ ಪ್ರತಿಭಟನಾ ನಿರತರು, ಕೊರೊನಾ ಸಂದರ್ಭದಲ್ಲೂ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ತೀವ್ರ ಮಳೆ ಕಾರಣ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧಿಸಲಾಯಿತು. ನಂತರ ಜನಪ್ರತಿನಿಧಿಗಳು ಇಲ್ಲದ ವೇಳೆ ಜಿಲ್ಲಾಧಿಕಾರಿಗಳು ಆಸ್ತಿ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ನೀಡಿದರು. ರಾಜ್ಯ ಸರ್ಕಾರ ಮತ್ತೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಹೊರಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ 2-3 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ನೀರು ಸರಬರಾಜು ಮಾಡುವ ಕುಂದವಾಡ ಕೆರೆಯನ್ನು ಅಭಿವೃದ್ಧಿಗೊಳಿಸ ಲಾಯಿತು. ಅಂದು ಕುಂದವಾಡ ಕೆರೆಯನ್ನು ವಿರೋಧಿಸಿದ ಬಿಜೆಪಿಯವರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಲೂಟಿಗೆ ಇಳಿದಿದ್ದಾರೆ ಎಂದು ದೂರಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನ ಹಿತ ಸರ್ಕಾರಗಳಲ್ಲ, ಜನವಿರೋಧಿ ಸರ್ಕಾರಗಳು ಕಣ್ಣು-ಕಿವಿ ಇಲ್ಲದ ದಪ್ಪ ಚರ್ಮದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.

ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಅತಿವೃಷ್ಟಿ ವೇಳೆ ಆಸ್ತಿ ತೆರಿಗೆ ಹಾಕದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಸಹ ಕಳೆದ ಫೆಬ್ರವರಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲಾಗಿದ್ದು, ಇದೀಗ ಮತ್ತೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಶೀಘ್ರ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾಪವನ್ನು ಹಿಂಪಡೆಯಬೇಕು ಹಾಗೂ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ಆಡಳಿತದಲ್ಲಿ ಜಾರಿಗೆ ತಂದ ಆಸ್ತಿ ತೆರಿಗೆಯ ಹೆಚ್ಚಳವನ್ನು ಹಿಂಪಡೆಯದಿದ್ದರೆ ಮನೆ-ಮನೆಗೆ ತೆರಳುವ ಆಂದೋಲನವನ್ನು ನಡೆಸಲಾಗುವುದು ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಗಳು ನಗರ ಪಾಲಿಕೆ ಆಡಳಿತಾಧಿಕಾರಿಗಳಾಗಿದ್ದ ವೇಳೆ ಜನತೆಗೆ ದ್ರೋಹ ಬಗೆದಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಜನತೆಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಸೋಮ್ಲಾಪುರದ ಹನುಮಂತಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಸೇರಿದಂತೆ ಇತರರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಬಿ.ಜಿ. ನಾಗರಾಜ್, ನಗರ ಪಾಲಿಕೆ ಸದಸ್ಯರುಗಳಾದ ವಿನಾಯಕ, ಜಾಕೀರ್ ಅಲಿ, ಕಲ್ಲಳ್ಳಿ ನಾಗರಾಜ್, ಸುಷ್ಮಾ ಪಾಟೀಲ್, ರಹಮತ್ ದಾದಾಪೀರ್, ಡೋಲಿ ಚಂದ್ರು, ಗೋವಿಂದ ಹಾಲೇಕಲ್ಲು, ಕೆ.ಎಂ. ಮಂಜುನಾಥ್, ಶುಭಮಂಗಳ, ಮಂಗಳಮ್ಮ, ಉಮಾಕುಮಾರ್, ಆವರಗೆರೆ ಅಣ್ಣೇಶನಾಯ್ಕ, ವೆಂಕಟೇಶನಾಯ್ಕ, ಮುನಿಸ್ವಾಮಿ, ಅಲೆಕ್ಸಾಂಡರ್, ರವಿ, ಗೋಪಾಲ್, ರಾಕೇಶ್, ಅಬ್ದುಲ್ ಜಬ್ಬಾರ್, ಮೊಟ್ಟೆ ದಾದಾಪೀರ್, ಯುವರಾಜ್, ಕರಿಬಸಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!