ಭದ್ರಾ ಬಲದಂಡೆ ನಾಲೆಗೆ ಜ.10ರ ನಂತರ ನೀರು

ಭದ್ರಾ ಕಾಲುವೆಗಳಲ್ಲಿ ಸಿಲ್ಟ್ ತೆಗೆಸಲು ಅವಕಾಶ ನೀಡಲು ಆಗ್ರಹ

ಮಲೇಬೆನ್ನೂರು, ಜ.8- ಕಳೆದ 2-3 ದಿನಗಳಿಂದ ಭದ್ರಾ ಅಚ್ಚು-ಕಟ್ಟು ವ್ಯಾಪ್ತಿಯ ಅಲ್ಲಲ್ಲಿ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವುದನ್ನು ಮುಂದೂಡಲಾಗಿದೆ.

ಹವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜ.9 ರವರೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಚ್ಚುಕಟ್ಟಿನ ರೈತರೇ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರಿಗೆ ಸದ್ಯಕ್ಕೆ ನಾಲೆಗೆ ನೀರು ಹರಿಸುವುದು ಬೇಡ ಎಂಬ ಮನವಿ ಮಾಡಿದ್ದಾರೆಂದು ಹೇಳಲಾಗಿದೆ. 

ಹಾಗಾಗಿ ಭದ್ರಾ ಬಲದಂಡೆ ನಾಲೆಗೆ ಜ.10 ರ ನಂತರ ಮಳೆ ನೋಡಿಕೊಂಡು ನೀರು ಹರಿಸುವ ಬಗ್ಗೆ ತಿರ್ಮಾನಿಸಲಾಗುವುದೆಂದು ಭದ್ರಾ ಕಾಡಾ ಮೂಲಗಳು ತಿಳಿಸಿವೆ. ಕಳೆದ ವಾರ ಮಲೇಬೆನ್ನೂರಿನಲ್ಲಿ ನಡೆದಿದ್ದ ಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಚ್ಚುಕಟ್ಟಿನ ತೋಟಗಳಿಗೆ ನೀರಿನ ಅವಶ್ಯಕತೆ ಇರುವದರಿಂದ ಜ. 1ರಿಂದ ತಕ್ಷಣ ಎಡದಂಡೆ ನಾಲೆಗೆ ಮತ್ತು ಜ.6 ರಿಂದ ಬಲದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು ಇದೀಗ ಮಳೆ ಬಂದು ತೋಟಗಳಿಗೆ ಸ್ವಲ್ಪ ಮಟ್ಟಿಗೆ ಹದ ಆಗಿರುವುದರಿಂದ ಸದ್ಯಕ್ಕೆ ನೀರು ಹರಿಸುವುದು ಬೇಡ ಎಂಬ ತಿರ್ಮಾನಕ್ಕೆ ರೈತರೆ ಬಂದಿರುವುದರಿಂದ ಉತ್ತಮ ಬೆಳವಣಿಗೆಯಾಗಿದೆ ಈಗಾಗಲೇ ಅಪ್ಪರ್‍ ಭದ್ರಾ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. 

ಎಡದಂಡೆ ನಾಲೆಗೆ 125 ಕ್ಯೂಸೆಕ್ಸ್‍ ಮತ್ತು ಗೊಂದಿ ನಾಲೆಗೆ 50 ಕ್ಯೂಸೆಕ್ಸ್‍ ನೀರನ್ನು ಮಾತ್ರ ಬಿಡಲಾಗುತ್ತಿದೆ.

ಸಿಲ್ಟ್‍ ತೆಗೆಸಲು ಮನವಿ: ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಭದ್ರಾ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಸಲು ಉದ್ಯೋಗ ಖಾತ್ರೆ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳುವಂತೆ ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಅವರು ದಾವಣಗೆರೆ ಜಿ.ಪಂ ಸಿಇಓ ಶ್ರೀಮತಿ ಪದ್ಮಾ ಬಸವಂತಪ್ಪ ಅವರಿಗೆ ಮನವಿ ಮಾಡಿದ್ದಾರೆ ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಜಿ.ಪಂ ಸಿಇಓ ಅವರು ಕಾಮಗಾರಿ  ವಿವರವನ್ನು ಆಯಾ ಗ್ರಾ.ಪಂ ಗಳಿಗೆ ನೀಡುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!