`ಕೃಷಿ ಬಿಕ್ಕಟ್ಟು ಮತ್ತು ಸವಾಲುಗಳು’ ಸಂವಾದ ಗೋಷ್ಠಿಯಲ್ಲಿ ಸತೀಶ್ ಜಾರಕಿಹೊಳಿ
ಹರಪನಹಳ್ಳಿ, ಜ.6- ದೇಶದ ಕೃಷಿ ವಲಯ ತೀವ್ರ ಸಂಕಷ್ಟದಲ್ಲಿದ್ದು ಆಳುವ ಸರ್ಕಾರ ರೈತರ ಹಾಗು ಕೃಷಿ ಸಂಬಂಧಿ ಕಾರ್ಮಿಕರ ಹಿತ ಕಾಯುವ ಕಾಯ್ದೆ ರೂಪಿಸುವುದು ಬಿಟ್ಟು, ಕೃಷಿ ವಲಯವನ್ನೇ ಕಾರ್ಪೊರೇಟ್ ಜಗತ್ತಿಗೆ ಒತ್ತೆ ಇಡುವುದರಲ್ಲಿ ಉತ್ಸಾಹ ತೋರುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಆರೋಪಿಸಿದರು
ಪಟ್ಟಣದ ತೆಗ್ಗಿನಮಠದ ಟಿ.ಎಂ.ಎ.ಇ ಸಭಾಂಗಣದಲ್ಲಿ `ಕೃಷಿ ಬಿಕ್ಕಟ್ಟು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಜರುಗಿದ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಕೃಷಿ ವಲಯದಲ್ಲಿ ಆಗುತ್ತಿರುವ ವ್ಯಾಪಾರೀಕರಣ ಮತ್ತು ಕೇಂದ್ರ ಸರ್ಕಾರ ತಂದಿರುವ ಕೃಷಿ ನೀತಿಯಿಂದ ರೈತರು ಜನಸಾಮಾನ್ಯರ ಬದುಕು ದುಸ್ತರವಾಗಿದೆ.
ಅವೈಜ್ಞಾನಿಕವಾಗಿ ಎ.ಪಿ.ಎಂ.ಸಿ ಕಾಯ್ದೆಯನ್ನು ತಂದು ಬಂಡವಾಳಶಾಹಿ ಅದಾನಿ, ಅಂಬಾನಿಗಳ ತಿಜೋರಿ ತುಂಬುವ ಕೆಲಸ ಮಾಡುತ್ತಿದೆ. ಇದನ್ನು ಪ್ರಶ್ನಿಸಿ ಗಡಿಯಲ್ಲಿ ರೈತರು ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರಧಾನಿ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸರ್ಕಾರಕ್ಕೆ ಎಚ್ಚರ ನೀಡಬೇಕು ಎಂದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅನಂತನಾಯ್ಕ ಮಾತನಾಡಿ, ಕಳೆದ 8-10 ವರ್ಷಗಳಿಂದ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಚಟುವಟಿಕೆಯಲ್ಲಿದೆ, ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲು ಈ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಇದು ಅರ್ಥಪೂರ್ಣವಾದ ಸಂವಾದ, ರೈತ ಚಳುವಳಿಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾನವ ಬಂಧುತ್ವ ವೇದಿಕೆ ವೈಚಾರಿಕವಾದ ಜನಪರ ಚಳುವಳಿ ಮಾಡುತ್ತಲಿವೆ ಎಂದು ಹೇಳಿದರು.
ಈ ವೇಳೆ ರಾಜ್ಯ ರೈತ ಸಂಘದ ಎಚ್.ಎಂ. ಮಹೇಶ್ವರಸ್ವಾಮಿ, ವಿವಿಧ ಸಂಘಟನೆಯ ಮುಖಂಡರಾದ ಆಲದಹಳ್ಳಿ ಷಣ್ಮುಖಪ್ಪ, ಗುಡಿಹಳ್ಳಿ ಹಾಲೇಶ್, ಕಬ್ಬಳ್ಳಿ ಮೈಲಪ್ಪ, ಅಲಗಿಲವಾಡದ ವಿಶ್ವನಾಥ್, ಎಚ್.ಎಂ. ಸಂತೋಷ್, ಗೋಣೆಪ್ಪ, ರಮೇಶನಾಯ್ಕ ನಿವೃತ್ತ ಉಪನ್ಯಾಸಕ ತಿಮ್ಮಪ್ಪ `ಕೃಷಿ ಬಿಕ್ಕಟ್ಟು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಇರ್ಫಾನ್ ಮುದಗಲ್, ತಾಲ್ಲೂಕು ಸಂಚಾಲಕ ಟಿ.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್, ಕೆ.ಪಿ.ಎಸ್.ಇ ಮಾಜಿ ಸದಸ್ಯ ಚಂದ್ರಶೇಖರಪ್ಪ, ನೀಲಗುಂದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ರಾಜಪ್ಪ, ಟಿ.ಎ,ಪಿ.ಸಿ.ಎಂ.ಎಸ್ ಅಧ್ಯಕ್ಷ ಪಿ.ಪ್ರೇಮಕುಮಾರ್, ಪುರಸಭೆ ಸದಸ್ಯ ಲಾಟಿ ದಾದಾಪೀರ್, ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ಯರಬಳ್ಳಿ ಉಮಾಪತಿ, ಅರಸಿಕೇರಿಯ ವೈ.ಡಿ.ಅಣ್ಣಪ್ಪ, ಸವಣೂರು ರಾಜಶೇಖರ್, ನಿವೃತ್ತ ಉಪನ್ಯಾಸಕ ಎಂ. ಗಂಗಪ್ಪ, ಕಂಚಿಕೇರಿ ಜಯಲಕ್ಷಿ, ಗುತ್ತಿಗೆದಾರರಾದ ಬಾಣದ ಅಂಜಿನಪ್ಪ, ಟಿ.ಉಮಾಕಾಂತ್, ಬಿ.ವಾಗೀಶ್, ಕೆ.ಗಣೇಶ್, ಕೆ.ಯೊಗೇಶ್, ದುಗ್ಗಾವತಿ ಮಂಜುನಾಥ್, ರವಿನಾಯ್ಕ, ಪಿ.ಅರುಣಕುಮಾರ್ ಸೇರಿದಂತೆ ಇತರರು ಇದ್ದರು.