ಒಗ್ಗಟ್ಟಿನಿಂದ ಮಾತ್ರ ಒಳ ಮೀಸಲಾತಿ ಸೌಲಭ್ಯ ಸಾಧ್ಯ

ಹರಿಹರ : ಗ್ರಾ.ಪಂ. ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಉಪಸಭಾಪತಿ ಡಾ. ಎಲ್. ಹನುಮಂತಯ್ಯ

ಹರಿಹರ, ಜ.6- ಮಾದಿಗ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಒಳ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದು ಉಪ ಸಭಾಪತಿ ಡಾ. ಎಲ್. ಹನುಮಂತಯ್ಯ ಹೇಳಿದರು.

ನಗರದ ಗುರುಭವನದಲ್ಲಿ ಮಾದಿಗ ಮೀ ಸಲಾತಿ ಹೋರಾಟ ಸಮಿತಿಯ ವತಿಯಿಂದ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಒಳ ಮೀಸಲಾತಿಗೆ ಮನವಿ, ಕಟ್ಟಡ ಕಾರ್ಮಿಕರ ಕಾರ್ಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯದಲ್ಲಿ ಮಾದಿಗ ಸಮಾಜದ ಶಾಸಕರು ಮತ್ತು ಸಂಸದರು ನೂರಕ್ಕಿಂತ ಹೆಚ್ಚು ಇದ್ದಾಗ ಒಳ ಮೀಸಲಾತಿ ಸೌಲಭ್ಯ ಕೇಳಲು ಶಕ್ತಿ ಬರುತ್ತದೆ. ಒಂದೊಂದು ತಾಲ್ಲೂಕಿನಲ್ಲಿ ಮೂವತ್ತು ಸಾವಿರ ಜನಸಂಖ್ಯೆ ಇದ್ದರೂ ಸಮಾಜದ ಕಾರ್ಯಕ್ರಮಕ್ಕೆ ಮೂರು ಸಾವಿರ ಜನರು ಬರುವುದಿಲ್ಲ ಎಂದರೆ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಹೆಚ್ಚು ಇದೆ. ಯಾವುದೇ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಹೋರಾಟವನ್ನು ಹಮ್ಮಿಕೊಳ್ಳದಿದ್ದರೆ, ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. 

ಹಿಂದೆ 68 ರಲ್ಲಿ ಮಾದಿಗ ಸಮಾಜದ ಶಾಸಕರು 25 ಕ್ಕೂ ಹೆಚ್ಚು ಸದಸ್ಯರು ಇದ್ದರು. ಆದರೆ ಈಗ 4 ಶಾಸಕರು ಇದ್ದಾರೆ ಮತ್ತು ಒಂದು ತಾಲ್ಲೂಕಿಗೆ ಒಬ್ಬರು ಜಿ.ಪಂ. ಸದಸ್ಯರು ಇದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದ ಶಕ್ತಿ ಯಾರಿಗೆ ಇರುತ್ತದೆ ಅವರಿಗೆ ಅವಕಾಶ ದೊರೆಯುತ್ತದೆ. ಯಾವ ಪಕ್ಷದವರು ನಿಮ್ಮ ಹಿತವನ್ನು ಕಾಪಾಡಲು ಮುಂದೆ ಬರುತ್ತಾರೋ ಮತ್ತು ಸಮಾಜವನ್ನು ಎಷ್ಟು ಅಭಿವೃದ್ಧಿ ಮಾಡುತ್ತಾರೋ ಅಂತಹ ಪಕ್ಷಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಮತವನ್ನು ಹಾಕಿ, ಅವರಿಂದ ಸೌಲಭ್ಯಗಳನ್ನು ಪಡೆಯುವಲ್ಲಿ ಯಶಸ್ಸು ಕಾಣಬೇಕು. 

ಮಾದಿಗ ಸಮಾಜದವರು ಸಹ ಕುರುಬ ಸಮಾಜದ ಜನಾಂಗದವರಷ್ಟೇ ರಾಜ್ಯದಲ್ಲಿ ಇದ್ದಾರೆ. ಕುರುಬರಿಗೆ ಮೀಸಲಾತಿ ಪಡೆಯಲು ಶಕ್ತಿ ಇದೆ ಎಂದ ಮೇಲೆ ಮಾದಿಗ ಸಮಾಜಕ್ಕೆ ಯಾಕೆ ಇಲ್ಲ? ಎಂದು ಹೇಳಿದರು.

ಮೀಸಲಾತಿಯಿಂದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂದು ಭಾವಿಸಬಾರದು. ಆದರೆ ಸಾವಿರ ಸಂಖ್ಯೆಯಲ್ಲಿನ ಉದ್ಯೋಗದ ಮೀಸಲಾತಿ ಸೌಲಭ್ಯದಿಂದ ಮಾದಿಗ ಸಮಾಜಕ್ಕೆ ಏಳು ನೂರು ಜನರಿಗೆ ದೊರೆಯುತ್ತದೆ ಎಂದು ಹೇಳಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ ಸ್ವಾಮೀಜಿ ಮಾತನಾಡಿ, ಸಮಾಜದಿಂದ ಸೌಲಭ್ಯಗಳನ್ನು ಪಡೆದು ಮೇಲೆ ಬಂದಂತಹ ವ್ಯಕ್ತಿಗಳು ಸಮಾಜದ ಬೆಳವಣಿಗೆಯ ಕಡೆ ಗಮನ ಹರಿಸಬೇಕು. ಸಾಮಾಜಿಕ ಸ್ಪರ್ಧೆಯಲ್ಲಿ ಎಲ್ಲರೂ ಮುಂದೆ ಬರಬೇಕು ಎಂದು ಹೋದಾಗ ಮೀಸಲಾತಿ ಸೌಲಭ್ಯಗಳನ್ನು ಪಡೆಯುವುದು ಅವಶ್ಯಕತೆ ಇದೆ. 

ಶಾಸಕ ಎಸ್. ರಾಮಪ್ಪ ಮಾತನಾಡಿ, ಮಾದಿಗ ಸಮಾಜದಲ್ಲಿ ಶೋಷಿತರು, ಬಡವರು ಹೆಚ್ಚಾಗಿ ಇರುವುದರಿಂದ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಸೌಲಭ್ಯಗಳನ್ನು ನೀಡುವ ಅವಶ್ಯಕತೆ ಇದೆ. ಆದ್ದರಿಂದ ನಾನೂ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದೇಶವು ಅಭಿವೃದ್ಧಿ ಹೊಂದಬೇ ಕಾದರೆ ಎಲ್ಲಾ ಸಮಾಜಗಳು ಸಹ ಮುಖ್ಯ ವಾಹಿನಿಗೆ ಬಂದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆದ್ದರಿಂದ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡುವುದಕ್ಕೆ ನಾನು ಕೂಡ ಸಿಎಂ. ಯಡಿಯೂರಪ್ಪನವರ ಗಮನಕ್ಕೆ ತರುವುದಾಗಿ ಹೇಳಿದರು.

ಜಿಪಂ ಸದಸ್ಯ ಬಸವಂತಪ್ಪ ಮಾತನಾಡಿ, ಮಾದಿಗ ಸಮಾಜದ ಜನರನ್ನು ಬೇರೆ ಸಮಾಜದ ಜನರು ಹಾಳು ಮಾಡುತ್ತಿಲ್ಲ, ನಮ್ಮ ಸಮಾಜದಲ್ಲಿನ ಕೆಲವು ನ್ಯೂನತೆಗಳಿಂದ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತಿದೆ. ಸಂಪಾದನೆ ಮಾಡಲು ಹೋರಾಟ ಮಾಡುವುದಕ್ಕೆ ಬರಬಾರದು ಸಮಾಜದ ಬಡವರಿಗೆ ನೆರವು ನೀಡುವುದಕ್ಕಾಗಿ ಹೋರಾಟಕ್ಕೆ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಶ್ರೀ ದೇವಿ ಮಂಜಪ್ಪ, ನಗರಸಭೆ ಸದಸ್ಯ ಹನು ಮಂತಪ್ಪ, ರಜನಿಕಾಂತ್, ಮುಖಂಡರಾದ ಎ.ಕೆ. ನಾಗಪ್ಪ, ಹನುಮಂತಪ್ಪ ವಕೀಲರು, ಎನ್.ಹೆಚ್. ಶ್ರೀನಿವಾಸ್, ಎಂ. ಹಾಲೇಶ್, ಭೂಮೇಶ್, ಆನಂದ್, ಹೆಚ್. ನಿಜಗುಣ, ಲಕ್ಷ್ಮಣ್,  ಹೆಚ್. ಶಿವಪ್ಪ, ಸಾವಿತ್ರಮ್ಮ, ಕೃಷ್ಣಪ್ಪ, ಕೇಶವ ಹಾಗೂ ಇತರರು ಹಾಜರಿದ್ದರು.

error: Content is protected !!