ಹೆಚ್ಚಿನ ವಸತಿ ಮಂಜೂರಾತಿಗಾಗಿ ಸಿಎಂಗೆ ಮನವಿ : ರಾಮಚಂದ್ರ

ಹೆಚ್ಚಿನ ವಸತಿ ಮಂಜೂರಾತಿಗಾಗಿ ಸಿಎಂಗೆ ಮನವಿ : ರಾಮಚಂದ್ರ - Janathavaniಜಗಳೂರು, ಜ.5 – ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ರಹಿತರು, ನಿವೇಶನ ರಹಿತರು ಇರುವುದರಿಂದ ಹೆಚ್ಚಿನ ಸಂಖ್ಯೆಯ ವಸತಿಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕರು ಮತ್ತು ಎಸ್.ಟಿ. ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿಗಳ ಸಭೆಯ ನಂತರ ದೂರವಾಣಿಯಲ್ಲಿ `ಜನತಾವಾಣಿ’ ಯೊಂದಿಗೆ ಮಾತನಾಡಿದ  ಶಾಸಕರು, ಸರಕಾರ ಬಂದು ಒಂದೂವರೆ ವರ್ಷವಾಗಿದೆ. ಆದರೆ ವಸತಿ ನಿರ್ಮಾಣದ ಪ್ರಗತಿ ಕಡಿಮೆ ಇದೆ. ಗ್ರಾಮೀಣ ಭಾಗದ ಬಡ ಜನರಿಗೆ ಹೆಚ್ಚಿನ ಪ್ರಮಾಣದ ಮನೆಗಳನ್ನು ನಿರ್ಮಿಸಿ ಕೊಡು  ವುದು ನನ್ನ ಆದ್ಯತೆಯಾಗಿದೆ. ಆದ್ದರಿಂದ ತಕ್ಷಣವೇ ಹೆಚ್ಚಿನ ವಸತಿ ಗಳನ್ನು ಮಂಜೂರಾತಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಿಸುವ ಕಾಮಗಾರಿ ಟೆಂಡರ್ ನೆನೆಗುದಿಗೆ ಬಿದ್ದಿದೆ. ತಕ್ಷಣವೇ ಈ ಕಾಮಗಾರಿಯ ಆರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಮೂರು ರಸ್ತೆಗಳನ್ನು ಅಭಿವೃದ್ದಿಗೆ 25 ಕೋಟಿ ರೂ ಮಂಜೂರಾತಿ ನೀಡಿದ್ದಾರೆ ಎಂದರು.

ನಾನು ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ `ನೀರು-ಸೂರು’ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ಸರಕಾರ ಅನುದಾನ ನೀಡದೆ ಕಾಮಗರಿಯು ಪ್ರಗತಿ ಯಲ್ಲಿದೆ. ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ  ಯೋಜನೆಯಾಗಿರುವುದರಿಂದ ಜಗಳೂರು ಕ್ಷೇತ್ರ ಕಾಲುವೆ ಕಾಮಗಾರಿ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ ಹಾಗೂ ಭದ್ರಾ ಹಿನ್ನೀರಿನ ಯೋಜನೆ (ಹೊಸಪೇಟೆ) ವ್ಯಾಪ್ತಿಗೆ ತಾಲ್ಲೂಕಿನ ಎರಡು ಗ್ರಾ.ಪಂಗಳ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

error: Content is protected !!