ಮತ ಎಣಿಕೆಯಲ್ಲಿ ಅಧಿಕಾರಿಗಳಿಂದ ಲೋಪದೋಷ : ಮರು ಎಣಿಕೆಗೆ ಮನವಿ

ಜಗಳೂರು, ಜ.5- ಗ್ರಾಮ‌ ಪಂಚಾಯಿತಿ ಚುನಾವಣೆಯ ಪ್ರಕ್ರಿಯೆ ಯಲ್ಲಿ ತೊಡಗಿದ್ದ ಅಧಿಕಾರಿಗಳು ಸಂಬಂಧಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದು ಮತ ಎಣಿಕೆಯಲ್ಲೂ ಸಹ ಲೋಪದೋಷವಾಗಿದೆ ಎಂದು ಆರೋಪಿಸಿ ಮರು ಮತ ಎಣಿಕೆ ಮಾಡುವಂತೆ ಸೋತ ಅಭ್ಯರ್ಥಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಣ್ಣೆಹಳ್ಳಿ ಗ್ರಾಮದ 1 ನೇ ವಾರ್ಡ್‌ನ ನಾಲ್ಕು ಸ್ಥಾನಗಳಿಗೆ 13 ಅಭ್ಯರ್ಥಿಗಳು, 2ನೇ ವಾರ್ಡ್‌ನ ಹದಿನಾಲ್ಕು ಸ್ಥಾನಗಳಿಗೆ ಒಟ್ಟು 27 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಮತದಾನ ಪ್ರಕ್ರಿಯೆಯಲ್ಲಿ ತೊಡಗಿದ್ದ ರಿಟರ್ನಿಂಗ್ ಅಧಿಕಾರಿ ಹಾಗು ಮತಗಟ್ಟೆ ಅಧಿಕಾರಿ ಮತ್ತು ಮತಗಟ್ಟೆ ಸಹಾಯಕ ಸಿಬ್ಬಂದಿಗಳು ಹಾಗು ಮತ ಎಣಿಕೆಯಲ್ಲಿ ಭಾಗಿಯಾದ ಅಧಿಕಾರಿಗಳು ಸಹ ಗೆದ್ದ ಅಭ್ಯರ್ಥಿಗಳ ಹತ್ತಿರದ ಸಂಬಂಧಿಗಳಾಗಿದ್ದು ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿದ್ದಾರೆ ಎಂದು ಪರಾಜಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಚುನಾವಣಾ ಅಧಿಕಾರಿ  ಹಾಗು ಮತ ಎಣಿಕೆ ಯಲ್ಲಿದ್ದ ಶಿಕ್ಷಕರು ಚುನಾವಣಾ ನಿಯಮ ಮೀರಿ ಪಕ್ಷಪಾತ ಮಾಡಿ ಮತ ಎಣಿಕೆ ನಿಯಮ ಉಲ್ಲಂಘಿ ಸಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

ಮತ ಎಣಿಕೆ ತಡ ರಾತ್ರಿ 12 ಗಂಟೆಯಲ್ಲಿ ನಡೆದಿದ್ದು, ಅಭ್ಯರ್ಥಿಗಳ ಮತ ಪತ್ರದ ಚಿಹ್ನೆ ಸರಿಯಾದ ಗುರುತು ತೋರಿಸದೇ ಅತಿ ಅವಸರದಲ್ಲಿ ಪ್ರಕ್ರಿಯೆ ಮುಗಿಸಿದ್ದಾರೆ. ವಿಶೇಷವಾಗಿ 1ನೇ ಮತಗಟ್ಟೆ ವಾರ್ಡ್‌ನಲ್ಲಿ 484 ಮತದಾನ ನಡೆದ ಬಗ್ಗೆ ದಾಖಲೆ ಇದೆ. ಆದರೆ ಎಣಿಕೆ ಸಂದರ್ಭದಲ್ಲಿ 486 ಮತ ಪತ್ರಗಳು ಇವೆ. ಇದರ ಬಗ್ಗೆ ಸ್ಪಷ್ಟನೆ ಕೊಡದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಮತ್ತು ಎಣಿಕೆ ನಂತರ ಅಭ್ಯರ್ಥಿಗಳಿಂದ ಸಹಿ ಪಡೆದಿಲ್ಲ. ಅಧಿಕಾರಿಗಳು ವಿಶೇಷ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಡಾ.ನಾಗವೇಣಿ ಅವರು ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಇದೀಗ ಮತ ಪೆಟ್ಟಿಗೆಗಳು ಖಜಾನೆ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದು ಮರು ಮತ ಎಣಿಕೆ ಮಾಡುವ ಅಧಿಕಾರ ನಮಗಿಲ್ಲ. ಈ ಬಗ್ಗೆ ಕೋರ್ಟ್ ಮೊರೆ ಹೋಗುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆರ್.ತಿಪ್ಪೇಸ್ವಾಮಿ, ಪಿ.ಆರ್.ಬಸವರಾಜ್, ಮಂಜುನಾಥ್, ಶಶಿಧರ್ ಸೇರದಂತೆ ಹಲವರು ಭಾಗವಹಿಸಿದ್ದರು.

error: Content is protected !!