ಭಾರತೀಯ ಗ್ರಾಮೀಣ ಮಹಿಳಾ ಸಂಘದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರೊ. ಸುಮ ವಿ. ಮಠದ್ ವಿಷಾದ
ದಾವಣಗೆರೆ, ಜ.4- ಪ್ರಸ್ತುತ ಯುವಪೀಳಿಗೆ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಬದಲು, ಪಾಶ್ಚಿಮಾತ್ಯ ಸಂಸ್ಕೃತಿಗೆ ತಲೆಬಾಗುತ್ತಿದ್ದಾರೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಂಘಟನಾಕಾರರಾದ ಪ್ರೊ. ಸುಮ ವಿ. ಮಠದ್ ಬೇಸರ ವ್ಯಕ್ತಪಡಿಸಿದರು.
ನಗರದ ವನಿತಾ ಸಮಾಜದ ಆವರಣದಲ್ಲಿ ವನಿತಾ ಸಮಾಜದ ಭಾರತೀಯ ಗ್ರಾಮೀಣ ಮಹಿಳಾ ಸಂಘದಿಂದ ಇಂದು ಸಂಜೆ ಏರ್ಪಾಡಾಗಿದ್ದ ನೂತನ ವರ್ಷ 2021ಕ್ಕೆ ಸಂಗೀತ ಸಂಜೆ, ಮಧುರ ಗೀತೆಗಳ ಸಂಗಮ ಮತ್ತು ಕ್ಯಾಂಪ್ ಫೈಯರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೇವಲ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೂಷಿಸುವುದಲ್ಲ. ಕೆಲ ಉತ್ತಮ ವಿಚಾರ, ವಸ್ತುಗಳೂ ಇದ್ದು, ಅವುಗಳನ್ನಷ್ಟೆ ಸದ್ಬಳಕೆಗೆ ಮಾಡಿಕೊಳ್ಳಬೇಕು.
ಮದ್ಯಪಾನ ನಿಷೇಧಕ್ಕೆ ಸರ್ಕಾರ ಇನ್ನೂ ಮನಸ್ಸು ಮಾಡದಿರುವುದು ನೋವಿನ ಸಂಗತಿ
ನಮ್ಮ ದೇಶದ ಸಂಸ್ಕೃತಿ ಮಾತ್ರ ಮದ್ಯ ಸೇವನೆಯನ್ನು ವಿರೋಧಿಸುತ್ತಿಲ್ಲ. ಚೈನಾ, ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲೂ ಮದ್ಯಪಾನ ನಿಷೇಧಕ್ಕೆ ಪ್ರಯತ್ನಗಳು ನಡೆದಿವೆ. ಮದ್ಯಪಾನ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಕಾಡುತ್ತಿದೆ. ಮದ್ಯಪಾನ ಭಾರತೀಯ, ಪಾಶ್ಚಿಮಾತ್ಯ ಸಂಸ್ಕೃತಿ ಅಲ್ಲ. ಮದ್ಯಪಾನದಿಂದ ಜನರ ಮನೆ-ಮನಸ್ಸುಗಳು ಹಾಳಾಗುತ್ತಿವೆ. ಅಲ್ಲದೇ ಸಾಕಷ್ಟು ಅಪರಾಧಗಳು, ಅತ್ಯಾಚಾರ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಸಮಾಜದ ನಿರ್ಮಾತೃಗಳಾದ ಯುವಪೀಳಿಗೆ ಮದ್ಯಪಾನಕ್ಕೆ ದಾಸ್ಯರಾಗುತ್ತಾ ದಾರಿ ತಪ್ಪುವ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನೇ ಮರೆಯಾಗಿಸಿಕೊಳ್ಳುತ್ತಿದ್ದಾರೆ ಎಂದು ಪ್ರೊ. ಸುಮ ವಿ. ಮಠದ್ ವಿಷಾದಿಸಿದರು.
ಶತ ಶತಮಾನಗಳಿಂದಲೂ ಮದ್ಯಪಾನ ನಿಷೇಧಕ್ಕೆ ಹೋರಾಟಗಳು ನಡೆದಿದ್ದು, ರಾಜಾರಾಮ್ ಮೋಹನ್ ರಾಯ್, ಜ್ಯೋತಿ ಬಾ ಪುಲೆ ಅವರಂತಹ ಸಂಸ್ಕೃತಿಯ ಪರಿಚಾರಕರು ಸಹ ಹೋರಾಟ ಮಾಡಿದ್ದಾರೆ. ಸಮಾಜದ ಸರ್ವನಾಶಕ್ಕೆ ನಾಂದಿ ಹಾಡುತ್ತಿರುವ ಮದ್ಯಪಾನ ನಿಷೇಧಿಸಲು ಸರ್ಕಾರ ಇನ್ನೂ ಮನಸ್ಸು ಮಾಡದಿರುವುದು ನೋವಿನ ಸಂಗತಿ. ಕುಡಿತದ ದುಷ್ಪರಿಣಾಮ, ನಿಷೇಧದ ಬಗ್ಗೆ ಜಾನ ನೀಡಿ ದೊಡ್ಡ ಮಟ್ಟದ ಸಾಂಸ್ಕೃತಿಕ ಚಳುವಳಿಯಾಗಬೇಕಿದೆ ಎಂದು ತಿಳಿಸಿದರು.
ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ಸಾಕಷ್ಟು ಹಣ ಸಂಗ್ರಹವಾಗು ತ್ತಿದ್ದು, ಆ ಹಣದಿಂದ ಶಾಲೆ, ರಸ್ತೆ, ಆಸ್ಪತ್ರೆ ಗಳನ್ನು ಕಟ್ಟಿಸುವುದಾಗಿ ಶುದ್ಧ ಸುಳ್ಳು ಹೇಳ ಲಾಗುತ್ತಿದೆ. ದುಡಿದು ದಣಿದ ಮನಸ್ಸುಗಳಿಗೆ ಮದ್ಯ ಹರಿಬಿಡಲಾಗುತ್ತಿದ್ದು, ಜಾನ ನೀಡುವ ಬದಲು ಹೆಂಡ ನೀಡಿ ಅಮಲಿನ ಮತ್ತನ್ನು ನೀಡುವುದು ಸರಿಯೇ ? ಎಂಬ ಬಗ್ಗೆ ಪ್ರಶ್ನೆಯ ಧ್ವನಿ ಎತ್ತಬೇಕಿದೆ. ಎಲ್ಲಿ ಯವರೆಗೂ ಅಜಾನ, ಪ್ರಶ್ನಿಸುವ, ಹೋರಾಟದ ದಿವ್ಯ ಸಂಸ್ಕೃತಿ ಬರುವುದಿಲ್ಲವೋ ಅಲ್ಲಿವರೆಗೂ ಆಳುವ ವರ್ಗಗಳು ಹೀಗೇ ಶೋಷಣೆ ಮಾಡುತ್ತಾ ಹೋಗಲಿವೆ ಎಂದು ಹೇಳಿದರು.
ಇಡೀ ವಿಶ್ವದಲ್ಲೇ ಸಂಸ್ಕೃತಿ ಹಾಳಾಗುತ್ತಿರುವುದರಿಂದ ನಮ್ಮ ದೇಶದ ಸಂಸ್ಕೃತಿಯೂ ಹಾಳಾಗುತ್ತಿದೆ. ಸಾಂಸ್ಕೃತಿಕ ಮಟ್ಟ ಹೆಚ್ಚಾಗಿ ಸಾಂಸ್ಕೃತಿಕ ಸಮಾಜ ನಿರ್ಮಾಣವಾಗುವ ಮುಖೇನ ವಿಶ್ವ ಸಂಸ್ಕೃತಿಯಾಗಬೇಕು ಎಂದು ಆಶಿಸಿದರು.
ಹಿನ್ನೆಲೆ ಗಾಯಕರುಗಳಾದ ಪೂಜಾ, ಶ್ರೀಧರ್, ಪವನ್ ಹಾಗೂ ನ್ಯಾಯಾಂಗ ಇಲಾಖೆಯ ಮತ್ತು ಗಾಯಕರಾದ ಟಿ.ಆರ್. ಹೇಮಂತ್ ಕುಮಾರ್ ಹಳೆಯ ಚಿತ್ರಗೀತೆಗಳು, ಮಧುರ ಗೀತೆಗಳನ್ನು ಹಾಡಿ ಸಂಗೀತ ಲೋಕಕ್ಕೆ ಕೊಂಡೊಯ್ದು ಸಂಗೀತದ ಸವಿ ಉಣಬಡಿಸಿದರು.
ಇದೇ ವೇಳೆ ತಂಪಿನ ವಾತಾವರಣದಲ್ಲಿ ಕ್ಯಾಂಪ್ ಫೈಯರ್ ಮುಖೇನ ಬೆಚ್ಚನೆಯ ಮಡಿಲಲ್ಲಿ ಇಂಪಾದ ಸಂಗೀತ ಮುದವನ್ನುಂಟು ಮಾಡಿತು.
ಈ ಸಂದರ್ಭದಲ್ಲಿ ಬಿಐಇಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಕೆ. ಗಣೇಶ್, ವನಿತಾ ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ಸಿ. ನಾಗಮ್ಮ ಕೇಶವಮೂರ್ತಿ, ಅಧ್ಯಕ್ಷರಾದ ಶ್ರೀಮತಿ ಗುಂಡಿ ಪುಷ್ಪ ಸಿದ್ದೇಶ್, ಕಾರ್ಯದರ್ಶಿ ಶ್ರೀಮತಿ ಗೀತಾ ಬದ್ರಿನಾಥ್ ಸೇರಿದಂತೆ ಇತರರು ಇದ್ದರು.