ದಾವಣಗೆರೆ, ಜ.4- ಎಲ್ಲೆಂದರಲ್ಲಿ ಗುಂಡಿ ಅಗೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಮಲ್ಲೇಶ್ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಎಲ್ಲೆಂದರಲ್ಲಿ ಪದೇ ಪದೇ ಗುಂಡಿಗಳನ್ನು ತೆಗೆಯುತ್ತಿರುವುದು ಮತ್ತು ತೆಗೆದಿರುವ ಗುಂಡಿಗಳನ್ನು ಮುಚ್ಚಿ ಮತ್ತೆ ತೆಗೆಯುತ್ತಿರುವುದು ಸರಿಯಲ್ಲ. ಹೀಗೆ ಒಂದೇ ಕಾಮಗಾರಿಯನ್ನು ಪದೇ ಪದೇ ಮಾಡುವುದರಿಂದ ಸರ್ಕಾರ ಅಂದರೆ ಜನ ಸಾಮಾನ್ಯರ ಹಣ ವ್ಯಯವಾಗುವುದಲ್ಲದೆ ವಾಹನ ಚಾಲಕರಿಗೆ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ಮಾಡಿದ ಕಾಮಗಾರಿಯನ್ನೇ ಪುನಃ ಮಾಡುವುದರಿಂದ ಸಾಮಾನ್ಯ ಜನರಿಗೆ ಎಷ್ಟು ತೊಂದರೆ ಮತ್ತು ಈ ಕಾಮಗಾರಿಯನ್ನು ಮತ್ತೆ ಮಾಡಲು ಹಣ ಎಷ್ಟು ಬೇಕು?, ನಿಮ್ಮ ಸ್ವಂತ ಹಣವಾದರೆ ಈ ರೀತಿ ಮಾಡುತ್ತಿದ್ದೀರಾ. ಈ ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಬಡ ಜನರು ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ.
ಒಮ್ಮೆ ಜಲಸಿರಿ ಯೋಜನೆಯಡಿ ಅಗೆದರೆ, ಇನ್ನೊಮ್ಮೆ ಬೆಸ್ಕಾಂ ಯೋಜನೆಯಡಿ ಅಗೆಯುವುದು, ಮತ್ತೊಮ್ಮೆ ದೂರವಾಣಿ, ಗ್ಯಾಸ್ ಸರಬರಾಜು ಯೋಜನೆಯಡಿಯಲ್ಲಿ ಅಗೆಯುತ್ತಾ ಹೋದರೆ ಸಂಚಾರ ಸಮಸ್ಯೆ, ಸರ್ಕಾರದ ಹಣ ಎಷ್ಟು ವ್ಯಯವಾಗಲಿದೆ ಎಂಬುದನ್ನು ಗಮನದಲ್ಲಿ ಟ್ಟುಕೊಂಡು ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಸೇರಿಕೊಂಡು ಒಂದು ಯೋಜನೆ ತಯಾರಿಸಿ ಕಾಮಗಾರಿಗೆ ಮುಂದಾಗಬೇಕು. ಜನರಿಗೆ, ಸಣ್ಣ ಪುಟ್ಟ ಅಂಗಡಿಯವರಿಗೆ, ವರ್ತಕರಿಗೆ ತೊಂದರೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿ.ಕೆ. ರವಿ, ತಾಲ್ಲೂಕು ಅಧ್ಯಕ್ಷ ಕೆ. ಪರಶುರಾಮ್, ಸಂಪತ್ ಕುಮಾರ್, ಯೋಗೇಶ್, ವೆಂಕಟೇಶ್, ಮನೋಜ್, ಶಿವರಾಜ್, ಮುಬಾರಕ್, ಕೊಟ್ರೇಶ್, ಮುರು ಗೇಶ್, ಸಿದ್ದೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.