ಭರವಸೆಯ ಹೊಸ ವರ್ಷಕ್ಕೆ ಸ್ವಾಗತ

ಕನಗೊಂಡನಹಳ್ಳಿ ಗ್ರಾಮದಲ್ಲಿ ಶಿಕ್ಷಕರೊಬ್ಬರು ರಸ್ತೆ ಮೇಲೆ  ಹ್ಯಾಪಿ ನ್ಯೂ ಇಯರ್ ಎಂದು ಬಣ್ಣದಿಂದ ಬರೆಯುತ್ತಿರುವುದು

ಕೇಕ್ ಸವಿದು, ಪಟಾಕಿ ಸಿಡಿಸಿ ಸಂಭ್ರಮಿಸಿದ ಜನತೆ

ದಾವಣಗೆರೆ, ಜ.1- 2020ರ ಬಹುತೇಕ ದಿನಗಳಲ್ಲಿ ಕೊರೊನಾ ದಿಂದಾಗಿ ಕಂಗೆಟ್ಟಿದ್ದ ಜನತೆ, ಹೊಸ ಆಶಾಭಾವನೆಯೊಂದಿಗೆ 2021ನೇ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.

ರಾತ್ರಿ 12 ಗಂಟೆಯಾಗುತ್ತಲೇ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಕೇಕಿ ಹಾಕಿ ಸಂಭ್ರಮಿಸಿದರು. ನಗರದ ವಿವಿಧ  ಬಡಾವಣೆ, ರಸ್ತೆಗಳಲ್ಲಿ ಪಟಾಕಿ ಸದ್ದು ಹೊಸ ವರ್ಷಾಗಮನಕ್ಕೆ ಸಾಕ್ಷಿಯಾಗಿತ್ತು.

ಸಾಮಾಜಿಕ ಜಾಲ ತಾಣಗಳಲ್ಲಿ ಶುಭಾಶಯಗಳ ವಿನಿಮಯ ಜೋರಾಗಿತ್ತು. ವಾಟ್ಸಾಪ್ ಸಂದೇಶಗಳ ಮೂಲಕ ಹೊಸ ವರ್ಷದ ಶುಭಾಶಯಗಳು ವಿನಿಮಯವಾದವು. ಕೆಲವರು ಕರೆ ಮಾಡಿದರೆ, ಮತ್ತೆ ಕೆಲವರು ವೀಡಿಯೋ ಕಾಲ್ ಮೂಲಕ ಶುಭಾಶಯ ಕೋರಿದರು.

ರಾತ್ರಿ ಪೊಲೀಸರ ವಾರ್ನಿಂಗ್ : ರಾತ್ರಿ 10ರ ವೇಳೆಗಾಗಲೇ ಪೊಲೀಸ್ ವಾಹನಗಳು ಗಸ್ತು ತಿರುಗಲಾರಂಭಿಸಿದ್ದವು. ಬೀದಿ ಬದಿ ನಿಲ್ಲುವವರಿಗೆ, ಹೋಟೆಲ್, ಬಾರ್‌ಗಳ ಮುಂದೆ ಇದ್ದವರಿಗೆ ಪೊಲೀಸರು ಮನೆಗೆ ತೆರಳುವಂತೆ ಸೂಚಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶವಿಲ್ಲೆಂದು ಮೈಕ್‌ಗಳ ಮೂಲಕ ಕೂಗುತ್ತಿದ್ದುದು ಕಂಡು ಬಂತು.

ಕೇಕ್‌ಗೆ ಬೇಡಿಕೆ: ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಕ್‌ಗೆ ನಗರದಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಬೇಕರಿಗಳು ಪ್ರತ್ಯೇಕ ಸ್ಟಾಲ್‌ ನಿರ್ಮಿಸಿ, ಕೇಕ್ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದವು. 

ಹೋಟೆಲ್‌ಗಳಲ್ಲಿ ಜನ ಸಾಗರ: ಬಾರ್ ಅಂಡ್ ರೆಸ್ಟೋರೆಂಟ್‌ಗಳು ಬಹುತೇಕ ಭರ್ತಿಯಾಗಿದ್ದವು.   ಕೆಲ ಫ್ಯಾಮಿಲಿ ರೆಸ್ಟೋರೆಂಟ್‌ಗಳ ಒಳಗೆ ಸಂಭ್ರಮಾಚರಣೆಗಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕುಟುಂಬ ಸಹಿತ ಆಗಮಿಸಿದ್ದ ಜನತೆ ತಡ ರಾತ್ರಿವರೆಗೆ ಸಂಭ್ರಮಿಸಿದರು.

ದೇವಸ್ಥಾನಗಳಲ್ಲಿ ಪೂಜೆ:   ವರ್ಷದ ಮೊದಲ ದಿನದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶುಕ್ರವಾರ ಮುಂಜಾನೆ ನಗರಕ್ಕೆ ಸಮೀಪದ ಆನಗೋಡು ಪಾರ್ಕ್, ಕೊಂಡಜ್ಜಿ ಕೆರೆ ಬಳಿಯ ಪಾರ್ಕ್ ಸೇರಿದಂತೆ, ನಗರದೊಳಗಿನ ಪಾರ್ಕುಗಳಲ್ಲಿ ಕುಟುಂಬ ಸಹಿತ ಬಂದ ಜನತೆ ಸಂಭ್ರಮಪಟ್ಟರು.

ಹಳ್ಳಿಗಳಲ್ಲೂ ಸಂಭ್ರಮ: ಸಿಟಿ ಮಂದಿಗಿಂತ ತಾವೇನೂ ಕಮ್ಮಿ ಎನ್ನುವಂತೆ ಹಳ್ಳಿಗಳಲ್ಲೂ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು. ಯುವಕರು ರಾತ್ರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಕೇಕೆ ಹಾಕಿ ಸಂಭ್ರಮಿಸಿದರು.

ಪ್ರಮುಖ ರಸ್ತೆಗಳಲ್ಲಿ, ಮನೆಗಳ ಮುಂದೆ ಹೊಸ ವರ್ಷಕ್ಕೆ ಸ್ವಾಗತ ಕೋರುವ ರಂಗೋಲಿ, ಬಣ್ಣದ ಸಾಲುಗಳನ್ನು ಬರೆಯಲಾಗಿತ್ತು.

error: Content is protected !!