ಹರಪನಹಳ್ಳಿ, ಫೆ. 27- ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾ ಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಕೆಪಿಆರ್ಎಸ್ ರೈತ ಸಂಘದ ಅಧ್ಯಕ್ಷ ಹುಲಿಕಟ್ಟೆ ಕೆ. ರಾಜಪ್ಪ ಮಾತನಾಡಿ, ಬಂಡ ವಾಳ ಶಾಹಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿದ್ದು, ಪರಿಣಾಮ ವಿವಿಧ ರೈತ ವಿರೋಧಿ ನೀತಿಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ 2020, ಜಾನುವಾರ ಹತ್ಯೆ ನಿಷೇಧ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ತಾಲ್ಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕು ಪತ್ರ ನೀಡು ವುದು, ನರೇಗಾದಲ್ಲಿ ಕೂಲಿ ಹಣ ಹೆಚ್ಚಿಸಿ ಕೆಲಸ ಕೊಡುವುದು ಸೇರಿದಂತೆ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಹೊಸಹಳ್ಳಿ ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ ಅತೀವೃಷ್ಟಿ ಪ್ರವಾಹ ಮತ್ತು ಕೋವಿಡ್ ಸಂಕಷ್ಟದಿಂದ ಜನತೆಗೆ ಸಮರ್ಪಕ ಮೂಲ ಸೌಕರ್ಯ ಒದಗಿಸಿ, ರಕ್ಷಣೆಗೆ ಮುಂದಾಗುವ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಬೆಳೆದ ರಾಗಿ, ಮೆಕ್ಕೆಜೋಳ, ಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆಯೊಂದಿಗೆ ಸರ್ಕಾರ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು.
ಕೋವಿಡ್ ಮೃತರಿಗೆ ಪರಿಹಾರ ನೀಡಬೇಕು. ಹಲವಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಭೂ ಸಾಗುವಳಿ ಮಾಡುತ್ತಾ ಬಂದಿರುವ ಫಾರಂ 57ನ್ನು ಹಾಕಿರುವ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ತಾಲ್ಲೂಕು ಕೆಪಿಆರ್ಎಸ್ ಕಾರ್ಯದರ್ಶಿ ಎಸ್. ನಾಗರಾಜ, ಟಿ.ವಿ. ರೇಣುಕಮ್ಮ, ಎ. ಭರಮಪ್ಪ, ಸುಭಾನ್ ನಾಯ್ಕ, ಬಿ. ಯಮುನಪ್ಪ, ಹುಲಿಕಟ್ಟೆ ರಹಮತ್, ಇದ್ಲಿ ರಾಮಪ್ಪ ಉಪಸ್ಥಿತರಿದ್ದರು.