ವಿದ್ಯಾ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಸಲ್ಲದು : ರಂಭಾಪುರಿ ಶ್ರೀ

ಹರಪನಹಳ್ಳಿ, ಫೆ.24- ಮನೆಯಲ್ಲಿರುವಾಗ ಅವರವರ ಧರ್ಮದ ಆಚರಣೆಗಳನ್ನು ಮಾಡಲಿಕ್ಕೆ ಸಂವಿಧಾನದಡಿಯಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಿದೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಸಮವಸ್ತ್ರ ಧರಿಸಿಯೇ ಹೋಗಬೇಕು ಎನ್ನುವ ಭಾವನೆ ನಮ್ಮದಾಗಿದೆ ಎಂದು ಬಾಳೇಹೊನ್ನೂರು ರಂಭಾಪುರಿ ಶ್ರೀ ಪ್ರಸನ್ನ ರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಕೆ.ಎಂ.ಬಸವರಾಜಯ್ಯನವರ ನೂತನ ಮಯೂರಿ ಫಾರ್ಮ್‌ಹೌಸ್ ಉದ್ಘಾಟಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಕ್ಷೇತ್ರದಲ್ಲಿ ಯಾವತ್ತು ಕೂಡ ರಾಜಕೀಯ ಪ್ರವೇಶ ಮಾಡಬಾರದು, ವಿದ್ಯೆಯನ್ನು ಸಂಪಾದಿಸುವ  ವಿಚಾರದಲ್ಲಿ ಮಕ್ಕಳ ಮನಸ್ಸು ಇರಬೇಕೇ ವಿನಃ,  ಮಕ್ಕಳು ಹಿಜಾಬ್ ಬಟ್ಟೆ ಹಾಗೂ ಶಾಲು ಧರಿಸುವಂತಹ ಹಠಕ್ಕೆ ಬೀಳುವಂತಹ ಕೆಲಸವನ್ನು ಯಾರೂ ಮಾಡಬಾರದು. ಈ ಬಗ್ಗೆ ಈಗಾಗಲೇ ನ್ಯಾಯಾಲಯವು ಸಮವಸ್ತ್ರ ಧರಿಸಿ ಬರಬೇಕು ಎನ್ನುವ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕು. ನ್ಯಾಯಾಲಯದ ಮಧ್ಯಂತರ ತೀರ್ಪಿಗೆ ಎಲ್ಲರೂ ಪಾಲನೆ ಮಾಡಬೇಕು, ಪೂರ್ಣ ತೀರ್ಪು ಬರುವವರೆಗೂ ಎಲ್ಲರೂ ಸಂಯಮ, ಶಾಂತಿ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಹಿಂದೂ ಸಂಸ್ಕೃತಿಯನ್ನು ವಿರೋಧಿಸುವ ಕೆಲವು ರಾಜಕೀಯ ಶಕ್ತಿಗಳು ದುಷ್ಟ ಪ್ರವೃತ್ತಿಗೆ ಇಳಿದಿರುವುದು ಖೇದದ ಸಂಗತಿ. ಬಹುಷ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ಜೀವದ ಭಯ ಇದೆ ಎಂದರೆ, ಬಹಳ ನೋವಿನ ಸಂಗತಿ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದಿರುವ ಹರ್ಷನ ಹತ್ಯೆಯ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಹಿಂದೂ ಸಮಾಜದಲ್ಲಿ ಸಮಗ್ರವಾದ ಐಕ್ಯತೆ ಇಲ್ಲದೇ ಇರುವುದು ಮತ್ತು ಯಾವುದೇ ವಿಚಾರವನ್ನು ಹಿಂದೂಗಳು ಗಂಭೀರವಾಗಿ ಆಲೋಚನೆ ಮಾಡದಿರುವುದೇ ಇಂತಹ ಘಟನೆಗಳಿಗೆ ಕಾರಣ. ಮುಂದೆ ಇಂತಹ ಘಟನೆಗಳು ನಡೆಯಲಾರದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದರು.

ವಿರೋಧ ಪಕ್ಷಗಳು ಸದನದಲ್ಲಿ ಧರಣಿ, ಸತ್ಯಾಗ್ರಹ ತಮ್ಮ ಹೊಣೆಗಾರಿಕೆಯನ್ನು ಮರೆಯಬಾರದು. ನಾಡಿನಲ್ಲಿ ಜ್ವಲಂತ ಸಮಸ್ಯೆಗಳು ಬೇಕಾದಷ್ಟು ಇವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜಕಾರಣಿಗಳು ಗಮನ ಹರಿಸಬೇಕೇ ಹೊರತು, ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿಸಿಕೊಳ್ಳಬಾರದು ಎಂದರು.

ರಾಷ್ಟ್ರಧ್ವಜ ಕುರಿತು ಯಾರೇ ಆಗಿರಲಿ ಅಪಮಾನ, ಅಗೌರವ ಮಾಡುವಂತಹ ಕೆಲಸ ಮಾಡಬಾರದು. ರಾಷ್ಟ್ರಧ್ವಜ ಹೊರತು ಪಡಿಸಿ ಯಾವುದೇ ಧ್ವಜ ಹಾರಲಿಕ್ಕೆ ಅವಕಾಶ ಕೊಡಬಾರದು. ಕೆಂಪು ಕೋಟೆಯ ಮೇಲೆ ಇತರೆ ಯಾವುದೇ ಸಮುದಾಯ, ವರ್ಗದ ಧ್ವಜ ಹಾರಬಾರದು. ಇವತ್ತು ದೇಶದಲ್ಲಿ ಸಾಮರಸ್ಯ ಕಾಪಾಡುವ ಸಂವಿಧಾನವಿದ್ದು, ಅದರಂತೆ ಎಲ್ಲರೂ ನಡೆದುಕೊಂಡು ಹೋಗಬೇಕು ಎಂದರು.

ಈ ಸಂದರ್ಭದಲ್ಲಿ ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರ ನವಲಿ ಹಿರೇಮಠ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ,  ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜಯ್ಯ, ಮುಖಂಡರಾದ ಕೆ.ಎಂ.ವಾಗೀಶ್, ಅಂಬ್ಲಿ ಮಂಜುನಾಥ್, ಮುದಗಲ್ ಗುರುನಾಥ್, ಸುಮೇರ್ ಮಲ್ ಜೈನ್, ಗೌತಮ್ ಚಂದ್, ಕಾಂತಿಲಾಲ್, ಎಸ್.ಎಂ. ವೀರಭದ್ರಯ್ಯ, ಸದೋಜಾತಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!