9.5 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ

ದಾವಣಗೆರೆ, ಫೆ. 13 – ನಗರದ ಕೆ.ಇ.ಬಿ. ಕಚೇರಿ ಬಳಿಯ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಇಡಲಾಗಿತ್ತಾದರೂ , ಮೂರ್ತಿ ಸಣ್ಣದಿತ್ತು. ಅದನ್ನು ಪ್ರತಿಮೆ ಅನ್ನುವಂತಿ ರಲಿಲ್ಲ. ಈಗ ಸಂವಿಧಾನ ಶಿಲ್ಪಿಗೆ ಮೆರುಗು ತರುವ ರೀತಿಯ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹರ್ಷ ವ್ಯಕ್ತಪಡಿಸಿದ್ದಾರೆ.

ಮೀರಜ್‌ನ ವಿಜಯ್ ಗುಜ್ಜಾರ್ ರೂಪಿಸಿರುವ ಒಂಭತ್ತುವರೆ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ಇದೇ ದಿನದಂದು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಪುತ್ಥಳಿ ಹಾಗೂ ಪಾಲಿಕೆ ಆವರಣದಲ್ಲಿ ಜಗದ್ಗುರು ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ವಿದ್ಯಾನಗರ ದಲ್ಲಿ ಮಹಿಳಾ ಜಿಮ್ ಸ್ಥಾಪಿಸಲು ಶಿಲಾನ್ಯಾಸ ನೆರವೇರಿಸಲಾಗುತ್ತಿದೆ ಎಂದವರು ಹೇಳಿದರು.

ಬಿಜೆಪಿ ಪಾಲಿಕೆಯ ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಎಲ್ಲರ ಸಹಕಾರದಿಂದ ಕೆಲಸ ಮಾಡ ಬೇಕಿದ್ದು, ವಿರೋಧ ಪಕ್ಷದವರೂ ಯೋಜನೆಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್, ಅಂಬೇಡ್ಕರ್ ಅವರು ಸಂವಿಧಾನ ಜಾರಿಗೆ ಬರದೇ ಇದ್ದಿದ್ದರೆ ನಾವೆಲ್ಲರೂ ಈಗಲೂ ಅಸ್ಪೃಶ್ಯರಂತೆ ಇರುತ್ತಿದ್ದೆವು. ಪ್ರತಿಮೆ ಸ್ಥಾಪನೆ ಒಳ್ಳೆಯ ಕೆಲಸವಾಗಿದೆ ಎಂದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಅನೇಕರ ಹೋರಾಟ ಹಾಗೂ ಕನಸಾಗಿತ್ತು. ಪುತ್ಥಳಿ ಸ್ಥಾಪನೆ ಲಕ್ಷಾಂತರ ಜನರಿಗೆ ಸಂಭ್ರಮದ ದಿನ. ರಾಷ್ಟ್ರಕ್ಕಾಗಿ ಜೀವ ತೇಯ್ದವರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ, ನಮಗೆ ಪ್ರತಿನಿತ್ಯ ಅವರ ಆದರ್ಶದ ಸ್ಮರಣೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ. ಗೋಣೆಪ್ಪ, ಗೀತಾ ದಿಳ್ಳೆಪ್ಪ, ಉಮಾ ಪ್ರಕಾಶ್, ರೇಣುಕ ಶ್ರೀನಿವಾಸ್, ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!