ಹರಪನಹಳ್ಳಿ : ನೂತನ ಪೊಲೀಸ್ ಠಾಣೆ ಕಟ್ಟಡದ ಶಂಕುಸ್ಥಾಪನೆಯಲ್ಲಿ ಸಂಸದ ಸಿದ್ದೇಶ್ವರ
ಹರಪನಹಳ್ಳಿ, ಫೆ.13- ಆಪದ್ಬಾಂಧವರಂತೆ.ಕಾಯಕ ಮಾಡುವ ಪೊಲೀಸ್ ಇಲಾಖೆಗೆ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲು ಮುಂದಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಪಟ್ಟಣದ ಪೊಲೀಸ್ ವಸತಿ ಸಮುಚ್ಛಯದ ಬಳಿ 2.50 ಕೋಟಿ ರೂ. ಮೊತ್ತದ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೊಲೀಸ್ ಇಲಾಖೆಗೆ ರಕ್ಷಣೆ ಇದ್ದರೆ, ಅವರು ಸಮಾಜವನ್ನು ರಕ್ಷಣೆ ಮಾಡಲು ಆತ್ಮಸ್ಥೈರ್ಯ ಬಲಗೊಳ್ಳುತ್ತದೆ. ಸಿಬ್ಬಂದಿಯ ಕರ್ತವ್ಯ ಅತ್ಯಂತ ಕ್ಲಿಷ್ಟಕರ ಕಾಯಕ. ಅವರ ಕರ್ತವ್ಯದ ಸಂದರ್ಭ ದಲ್ಲಿ ಅನೇಕ ಸವಾಲುಗಳನ್ನು ಎದುರಿಸ ಬೇಕಾದ ಸಂದಿಗ್ಧತೆ ಅವರನ್ನು ಸುತ್ತುವರೆ ದಿರುತ್ತದೆ. ಆ ಸಂದರ್ಭದಲ್ಲಿ ಅವರು ವ್ಯಕ್ತಿಗತವಾಗಿ ಹಾಗೂ ಕೌಟುಂಬಿಕವಾಗಿ ಭಾವನಾತ್ಮಕ ಸಂಬಂಧಗಳನ್ನು ಮರೆತು, ಜೀವಭಯ ತೊರೆದು ಕರ್ತವ್ಯ ಪರಿಪಾ ಲಿಸಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿಯೇ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಮನೆ ಮಾಡಿದೆ ಎಂದರು.
ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ನೂತನ ಪೊಲೀಸ್ ಠಾಣೆ ಯನ್ನು ಶಿಥಿಲಗೊಂಡಿರುವ ಹಳೆಯ ಕಟ್ಟಡದ ಜಾಗದಲ್ಲಿ ಪುನರ್ನಿರ್ಮಾಣ ಮಾಡುವುದಕ್ಕಿಂತ, ವಿಶಾಲವಾದ ಪರ್ಯಾಯ ಜಾಗದಲ್ಲಿ ನಿರ್ಮಿಸಬೇಕು ಎಂಬ ಆಲೋಚನೆ ಹಿನ್ನೆಲೆಯಲ್ಲಿ ಈ ಜಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಕಳೆದ ಆರು ತಿಂಗಳ ಹಿಂದೆಯೇ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಈ ಸ್ಥಳವನ್ನೇ ಅಂತಿಮ ಗೊಳಿಸಿ, ಮಹಿಳಾ ಸಿಬ್ಬಂದಿಗಾಗಿ ಪ್ರತ್ಯೇಕ ಕೊಠಡಿ, ದಾಖಲೆಗಳ ಸಂಗ್ರಹ ಕೊಠಡಿ, ಕಂಪ್ಯೂಟರ್ ವಿಭಾಗ ಸೇರಿದಂತೆ, ಅತ್ಯಾಧುನಿಕ ವ್ಯವಸ್ಥೆ ಹೊಂದಿ ರುವ ಠಾಣೆ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿಗದಿತ ಕಾಲಾವಧಿ ಒಳಗೆ ಸುಸಜ್ಜಿತ ಹಾಗೂ ಗುಣಮಟ್ಟದ ಕಟ್ಟಡವನ್ನು ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗಾಗಿ ನೆರವಾಗಲು ಹಾಗೂ ಅಪರಾಧ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಸಿಸಿ ಕ್ಯಾಮೆರಾ ಕಣ್ಗಾವಲು ಅಳವಡಿಸುವಂತೆ ಇಲಾಖೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ಸರ್ಕಾರದ ಅನುದಾನಕ್ಕೂ ಮೊದಲೇ ದಾನಿಗಳ ನೆರವಿನಿಂದ ಪಟ್ಟಣದ ಆಯ್ದ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಅಳವಡಿಸಲಾಗಿದೆ. ಇದರಿಂದ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಜತೆಗೆ, ಅಪರಾಧ ಪ್ರಕರಣಗಳ ತುರ್ತು ಸ್ಪಂದನೆಗಾಗಿ ಸುಸಜ್ಜಿತವಾದ ವಾಹನವನ್ನು ಸಹ, 11 ಲಕ್ಷ ರೂ. ಮೊತ್ತದ ಶಾಸಕರ ಅನುದಾನದಲ್ಲಿ ವಿತರಿಸ ಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಡಿವೈಎಸ್ಪಿ ಹಾಲಮೂರ್ತಿ ರಾವ್, ಸಿಪಿಐ ನಾಗರಾಜ ಕಮ್ಮಾರ್, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಶಾಸಕರ ಪುತ್ರ ಜಿ.ಕೆ. ವಿಷ್ಣುವರ್ದನ ರೆಡ್ಡಿ, ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಮುಖ್ಯಾಧಿಕಾರಿ ಶಿವಕುಮಾರ್ ಯರಗುಡಿ, ಸದಸ್ಯರಾದ ಎಂ.ವಿ.ಅಂಜಿನಪ್ಪ, ಕಿರಣ್ ಕುಮಾರ್, ಗೊಂಗಡಿ ನಾಗರಾಜ, ಎಂ.ಕೆ. ಜಾವೀದ್, ರೊಕ್ಕಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ಎನ್. ಲೋಕೇಶ್, ಎಂ.ಪಿ. ನಾಯ್ಕ್, ಕೆಂಗಳ್ಳಿ ಪ್ರಕಾಶ, ಎಂ. ಪ್ರಾಣೇಶ, ಮುತ್ತಿಗಿ ರೇವಣಸಿದ್ದಪ್ಪ ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ, ಕಣವಿಹಳ್ಳಿ ಮಂಜುನಾಥ, ಡಿಶ್ ವೆಂಕಟೇಶ್ ಇತರರು ಈ ಸಂದರ್ಭದಲ್ಲಿ ಇದ್ದರು.