ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹ

ಪ್ರಧಾನಿಗೆ ಬಿಸಿಯೂಟ ತಯಾರಕರ ಮನವಿ

ದಾವಣಗೆರೆ, ಫೆ.6- ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸದೆ ಕೈಬಿಟ್ಟಿರುವುದನ್ನು ವಿರೋಧಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮುಖೇನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 19 ವರ್ಷಗಳಿಂದ ಶಾಲೆಗಳಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರಿಗೆ ತಿಂಗಳಿಗೆ 2,100 ರೂ., ಸಹಾಯಕ ಅಡುಗೆಯವರಿಗೆ 2,000 ರೂ. ಮಾತ್ರ ದೊರೆಯುತ್ತಿದ್ದು, ಈ ಅತ್ಯಲ್ಪ ವೇತನದಿಂದ ಬಿಸಿಯೂಟ ತಯಾರಕರು ಜೀವನ ನಿರ್ವಹಿಸಲು ಕಷ್ಟವಾಗಿದೆ. ಕೇಂದ್ರ ಸರ್ಕಾರ ಮಂಡಿಸಿದ 2022 ರ ಬಜೆಟ್‌ನಲ್ಲಿ ವೇತನ ಹೆಚ್ಚಿಸದೇ ಬಿಸಿಯೂಟ ತಯಾರಕರನ್ನು ಕಡೆಗಣಿಸಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.

ಬಿಸಿಯೂಟ ತಯಾರಕರಿಗೆ ಇದೇ ಬಜೆಟ್‌ನಲ್ಲಿ ವೇತನ ಹೆಚ್ಚಿಸಲು ಪುನರ್ ಪರಿಶೀಲನೆ ಮಾಡಿ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಸಿಯೂಟ ತಯಾರಕರ ಫೆಡರೇಶನ್ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ತಾಲ್ಲೂಕು ಅಧ್ಯಕ್ಷೆ ಮಳಲ್ಕೆರೆ ಜಯಮ್ಮ, ತಾಲ್ಲೂಕು ಖಜಾಂಚಿ ಪದ್ಮಾ , ರಾಜ್ಯ ಖಜಾಂಚಿ ಬೆಳಲಗೆರೆ ರುದ್ರಮ್ಮ , ಜಿಲ್ಲಾ ಉಪಾಧ್ಯಕ್ಷೆ ಸರೋಜ, ಜಿಲ್ಲಾ ಸಂಚಾಲಕ ಸಿ.ರಮೇಶ್, ಮುಖಂಡರುಗಳಾದ ಮಂಜುಳ, ಗೀತಾ , ಚೆನ್ನಮ್ಮ , ಸುವರ್ಣಮ್ಮ , ಎಐಟಿಯುಸಿ ಮುಖಂಡ ನರೇಗಾ ರಂಗನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!