ಗಣತಿ ನಡೆಸಿ ಪುನರ್ವಸತಿ ಕಲ್ಪಿಸಲು ದೇವದಾಸಿ ಮಹಿಳೆಯರ ಆಗ್ರಹ

ದಾವಣಗೆರೆ, ಫೆ.6- ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸುವುದೂ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ವತಿಯಿಂದ  ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಸಂಘಟನೆಯ ಪದಾಧಿಕಾರಿಗಳು, ದೇವದಾಸಿ ಮಹಿಳೆ ಯರು, ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ದೇಶಾದ್ಯಂತ ದೇವದಾಸಿ ಮಹಿಳೆಯರು, ಅಂತಹವರ ಕುಟುಂಬ ಸದಸ್ಯರ ಗಣತಿ ಮಾಡಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯಲ್ಲಿ ಸಾಕಷ್ಟು ತಿದ್ದುಪಡಿ ತರಬೇಕು. ದೇವದಾಸಿ ಪದ್ಧತಿ ವಿಸ್ತಾರವಾಗದಂತೆ ತಡೆಯ ಬೇಕು. ಇಂತಹ ದುಷ್ಟ ಪದ್ಧತಿಗೆ ಬಲಿಯಾದ ಬಾಲಕಿಯರು, ಯುವತಿಯರು, ಮಹಿಳೆಯರು, ಕುಟುಂಬ ಸದಸ್ಯರನ್ನು ಸ್ವಾವಲಂಬಿಯಾಗಿಸಲು ಪರಿಣಾಮಕಾರಿ ಪುನರ್ವಸತಿ ಕಾರ್ಯ ಕೈಗೊಳ್ಳಬೇಕು ಎಂದು ಸಂಘಟನೆ ರಾಜ್ಯ ಅಧ್ಯಕ್ಷೆ ಟಿ.ವಿ. ರೇಣುಕಮ್ಮ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಕೆ.ಹೆಚ್. ಆನಂದರಾಜ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಹಿರಿಯಮ್ಮ, ಹೊನ್ನಮ್ಮ, ಕರಿಯಮ್ಮ, ಗುಡ್ಡಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!