ವಾಸವಿರದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಒತ್ತಾಯ

ದಾವಣಗೆರೆ, ಜ. 28- ಪಾಲಿಕೆಯ 16ನೇ ವಾರ್ಡ್‌ನ ವಿನೋಬನಗರದಲ್ಲಿ ವಾಸವಿಲ್ಲದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಘಟಕದಿಂದ   ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅವರುಗಳಿಗೆ ಮನವಿ ಸಲ್ಲಿಸಲಾಯಿತು.

ಡಿಸಿ ಕಛೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು, ವಕೀಲರು, ವಿನೋಬನಗರ ವಾರ್ಡ್‌ನಲ್ಲಿ ವಾಸಿಸದ ಜನರ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿದ್ದು, ಅಂತಹ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಪ್ರಕೋಷ್ಠದ ಜಿಲ್ಲಾ ಸಂಚಾಲಕ – ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಹೆಚ್. ದಿವಾಕರ್, ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ- ಯುವ ವಕೀಲ ಎ.ಸಿ. ರಾಘವೇಂದ್ರ ಮೊಹರೆ ಸ್ಥಳೀಯವಾಗಿ ವಾಸಿಸದೇ, ನಕಲಿ ಡೋರ್‌ ನಂಬರ್‌ಗಳನ್ನು ನೀಡಿ, ವಿನೋಬನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವವರ ವಿರುದ್ಧ ಚುನಾವಣಾ ಆಯೋಗದ ನಿಯಮಾನುಸಾರ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಟ್ಟಿದ್ದರೂ, ನಕಲಿ ಡೋರ್ ನಂಬರ್ ನೀಡಿ, ಸ್ಥಳೀಯವಾಗಿ ವಾಸಿಸದ ಸಾವಿರಾರು ಜನರು ವಿನೋಬನಗರ ಮತದಾರರೆಂದು ಪಟ್ಟಿಯಲ್ಲಿದ್ದಾರೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಕೋಷ್ಠದ ಮನೋಹರ್‌ ಮಹೇಂದ್ರಕರ್ ಶಿವಕುಮಾರ್, ಎಸ್. ಮಂಜು ಉಪಸ್ಥಿತರಿದ್ದರು.

error: Content is protected !!