ಇಟ್ಟಿಗೆ ಭಟ್ಟಿ ಕಾರ್ಮಿಕರ ಆರೋಗ್ಯ ತಪಾಸಣೆ

ಹರಿಹರ, ಜ. 28 – ಸಮೀಪದ ಕುಮಾರಪಟ್ಟಣದ ನದಿ ಪಾತ್ರದಲ್ಲಿರುವ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಲಸಿಕೆ ಹಾಕಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಮುನ್ನೂರು ಕಿ.ಮೀ.ಗಳ ದೂರದಿಂದಲೂ ಹೊಟ್ಟೆಪಾಡಿಗಾಗಿ ಜನರು ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕು ಆರೋಗ್ಯ ಅಧಿಕಾರಿ ಟಿ.ಜಿ. ರಮೇಶ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು.

ಸಮುದಾಯ ಆರೋಗ್ಯ ಆಧಿಕಾರಿ ಬಿ.ಸಿ. ಸ್ಫಟಿಕ ಅವರು ಇಟ್ಟಿಗೆ ಭಟ್ಟಿ ಮಹಿಳೆಯರಿಗೆ ಸ್ವಚ್ಛತೆಯ ಮೂಲಕ ಸೋಂಕು ರೋಗ ತಡೆಯುವ ಮಾಹಿತಿ ನೀಡಿದರು.

ಪ್ರಾಥಮಿಕ ಸುರಕ್ಷಾ ಆಧಿಕಾರಿ ರೇಖಾ ಕರೇಗೌಡರ್ ಅವರು ಮಕ್ಕಳಿಗೆ ಪೋಲಿಯೋ ಹನಿ ಮತ್ತು ಕೆಲಸಗಾರರಿಗೆ ಕೊರೊನಾ ಲಸಿಕೆ ಅಗತ್ಯದ ಕುರಿತು ತಿಳಿಸಿದರು. 

ಲಸಿಕೆ ಬಾಕಿ ಇರುವವರು ತಕ್ಷಣವೇ ಲಸಿಕೆ ಪಡೆಯಲು ಕ್ರಮ ತೆಗೆದುಕೊಳ್ಳಲಾಯಿತು.

ಆಶಾ ಕಾರ್ಯಕರ್ತರಾದ ಸುಶಿಲಮ್ಮ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೋಡಿಯಾಲ ಎರಡನೇ ವಾರ್ಡ್ ಪಂಚಾಯತ್ ಸದಸ್ಯ ಬಸವಣ್ಣೆಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ|| ಜಿ ಜೆ ಮೆಹೆಂದಳೆ ಉಪಸ್ಥಿತರಿದ್ದರು.

error: Content is protected !!