ಪರಿಹಾರ ಬೇಕಾಗಿಲ್ಲ, ನಮ್ಮ ಭೂಮಿ ನಾವು ಬಿಟ್ಟು ಕೊಡುವುದಿಲ್ಲ

ವಿದ್ಯುತ್ ಲೈನ್ ಅಳವಡಿಕೆ: ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ದಾವಣಗೆರೆ, ಜ.23- ಹೈಟೆನ್ಷನ್ ವಿದ್ಯುತ್ ಲೈನ್ ಅಳವಡಿಸುವ ಸಲುವಾಗಿ  ರೈತರ ಒಪ್ಪಿಗೆ ಇಲ್ಲದೆ ಒತ್ತಾಯಪೂರ್ವಕವಾಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಕೆಪಿಟಿಸಿಎಲ್ ಮುಂದಾಗಿರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಜಿಲ್ಲಾ ಸಂಚಾಲಕ ಆರ್. ಪ್ರಕಾಶ್ ಲಿಗಾಡಿ ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚನ್ನಗಿರಿ ತಾಲ್ಲೂಕು ಉಬ್ರಾಣಿ ಹೋಬಳಿಯ ವಡ್ನಾಳ್ ಬನ್ನಿಹಟ್ಟಿ ಮತ್ತು ಅರಳಕಟ್ಟಿ ಗ್ರಾಮಗಳಲ್ಲಿ ಚಿತ್ರದುರ್ಗ ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರೈತರ ಜಮೀನುಗಳಲ್ಲಿ ವಿದ್ಯುತ್ ಲೈನ್ ಅಳವಡಿಸುವ ಅನಧಿಕೃತ ಕಾಮಗಾರಿಗೆ ಮುಂದಾಗಿದ್ದು, ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡದೇ, ರೈತರ ಸಭೆ ಕರೆದು ಚರ್ಚಿಸದೇ ಮನಸೋ ಇಚ್ಛೆ ನೀಲ ನಕ್ಷೆ ತಯಾರಿಸಿ, ರೈತರ ಜಮೀನು ಸ್ವಾಧೀನಪಡಿಸಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.

ಹೊಸದುರ್ಗ ತಾಲ್ಲೂಕು ಮಧುರೆ ಗ್ರಾಮದ ಸಮೀಪ ಹೊಸದಾಗಿ ನಿರ್ಮಾಣ ಮಾಡುತ್ತಿರುವ ವಿದ್ಯುತ್ ಪ್ರಸರಣ  ಕೇಂದ್ರದಿಂದ ಚನ್ನಗಿರಿ ತಾಲ್ಲೂಕು ಬೆಂಕಿಕೆರೆ ಬಳಿ ನಿರ್ಮಿಸುತ್ತಿರುವ ವಿದ್ಯುತ್ ಸ್ವೀಕರಣಾ ಕೇಂದ್ರ ಅವೈಜ್ಞಾನಿಕವಾಗಿವೆ. ನಮಗೆ ಸರ್ಕಾರದ ಪರಿಹಾರ ಬೇಕಾಗಿಲ್ಲ. ನಮ್ಮ ಭೂಮಿ ನಾವು ಬಿಟ್ಟು ಕೊಡುವುದಿಲ್ಲ ಎಂದರು.

ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಗಳು, ಕಂದಾಯ ಮಂತ್ರಿಗಳು, ಇಂಧನ ಸಚಿವರೂ ಸೇರಿದಂತೆ ಸಚಿವರು, ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾರಾಯಣಮೂರ್ತಿ, ಸುಧಾ, ರಾಜಪ್ಪ, ನಾಗರಾಜಪ್ಪ, ಕುಮಾರಪ್ಪ ವಡ್ನಾಳ್, ಪ್ರಸನ್ನಚಾರ್ ಮತ್ತಿತರರಿದ್ದರು.

error: Content is protected !!