ಹರಿಹರ, ಜ. 19 – ನಗರದ ಹೊರವಲಯದ ಕೋಡಿಯಾಲ ಹೊಸಪೇಟೆ ಗ್ರಾಮದ ಪುಣ್ಯಕೋಟಿ ಮಠದ ವತಿಯಿಂದ ಜನವರಿ 23-24 ರಂದು ಆಯೋಜಿಸಿದ್ದ ತುಂಗಾರತಿ ಕಾರ್ಯಕ್ರಮವನ್ನು ಕೊರೊನಾ ಕಾರಣ ದಿಂದ ತಾತ್ಕಾಲಿಕವಾಗಿ ಮುಂದೂಡ ಲಾಗಿದೆ ಎಂದು ಶ್ರೀ ಮಠದ ಭಕ್ತರು ಹಾಗೂ ಜಿ.ಪಂ. ಮಾಜಿ ಸದಸ್ಯರಾದ ಮಂಗಳಗೌರಿ ಅರುಣ್ ಕುಮಾರ್ ಪೂಜಾರ್ ತಿಳಿಸಿದರು.
ನಗರದ ಹೊರವಲಯದ ಕೋಡಿಯಾಲ ಹೊಸಪೇಟೆ ಗ್ರಾಮದ ಪುಣ್ಯಕೋಟಿ ಮಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜನವರಿ 23-34 ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ದತೆ ಕೂಡ ಮಾಡಲಾಗುತ್ತಿತ್ತು ಎಂದಿದ್ದಾರೆ. ಆದರೆ, ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಮತ್ತು ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಗಳು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳನ್ನು ಭೇಟಿ ಮಾಡಿ ಸದ್ಯದ ಪರಿಸ್ಥಿತಿಯ ವಿಚಾರಗಳನ್ನು ಅವರ ಗಮನಕ್ಕೆ ತಂದಾಗ ರಂಭಾಪುರಿ ಜಗದ್ಗುರುಗಳು ತುಂಗಾರತಿ ಮುಂದೂಡಲು ತಿಳಿಸಿದ್ದಾರೆ.
ಶ್ರೀಗಳ ಸೂಚನೆಯಂತೆ ಮಾರ್ಚ್ ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ನಂತರದಲ್ಲಿ ತುಂಗಾರತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಗಳು ಮಾತನಾಡಿ, ಬರುವ ಮಾರ್ಚ್ ತಿಂಗಳಲ್ಲಿ ಕೊರೊನಾ ಹತೋಟಿಗೆ ಬರದಿದ್ದರೆ ಬರುವ ವರ್ಷ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುಷ್ಪ ಬಾದಾಮಿ ರಾಣೇಬೆನ್ನೂರು, ಕೆ.ಸಿ. ಶಾಂತಕುಮಾರಿ ನಾಗರಾಜ್, ಸಿದ್ದೇಶ್ ಪೂಜಾರ್, ಕರಿಬಸಪ್ಪ ಹಿರೇಬಿದರಿ ಮತ್ತಿತರರು ಉಪಸ್ಥಿತರಿದ್ದರು.