ರಸ್ತೆ ಬದಿಯಲ್ಲಿ ಮೇಲೆದ್ದ ಕಬ್ಬಿಣದ ಸರಳುಗಳು : ಸವಾರರಿಗೆ ಆತಂಕ

ದಾವಣಗೆರೆ, ಜ.16- ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಬದಿಯಲ್ಲಿ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯಕ್ಕೆ ದಾರಿ ಮಾಡಿಕೊಟ್ಟಿವೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.

ವೃತ್ತದ ಬಳಿಯ ಜಯದೇವ ವೃತ್ತ ಸಂಪರ್ಕಿಸುವ ಒಂದು ಭಾಗದ ರಸ್ತೆಯ ಹಂಪ್ಸ್ ನ ಬದಿಯಲ್ಲಿ ರಸ್ತೆ ಅಭಿವೃದ್ಧಿಗೆ ಹಾಕಲಾದ ಕಬ್ಬಿಣದ ಸಲಾಕೆಗಳು ನೆಲದಿಂದ 6 ಇಂಚಿನಷ್ಟು ಮೇಲೆದ್ದಿವೆ. ಇವುಗಳು ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಇದು ಪ್ರಮುಖ ರಸ್ತೆಯಾಗಿರುವುದರಿಂದ ಇಲ್ಲಿ ಸಾಕಷ್ಟು ವಾಹನಗಳ ಓಡಾಟವಿದೆ. ಮುಖ್ಯವಾಗಿ ಪಾದಚಾರಿಗಳು ಸಹ ಸಾಗಲಿದ್ದು, ಶಾಲಾ ಮಕ್ಕಳೂ ಓಡಾಡುತ್ತಾರೆ. ಹೀಗೆ ರಸ್ತೆಯಲ್ಲಿ ಸಾಗುವಾಗ ಪಾದಚಾರಿಗಳು, ಮಕ್ಕಳ ಕಾಲಿಗೆ ಸಿಲುಕಿ ಎಡವಿ ಬಿದ್ದರೆ ಮೇಲೆದ್ದಿರುವ ಕಬ್ಬಿಣದ ಸಲಾಕೆಗಳು ಚುಚ್ಚಿ ಅನಾಹುತ ಸಂಭವಿಸುವಂತಹ ವಾತಾವರಣವಿದೆ ಎಂಬ ಅಸಮಾಧಾನವೂ ಕಾಳಜಿ ಯುಳ್ಳ ನಾಗರಿಕರದ್ದಾಗಿದೆ.

ಈ ಬಗ್ಗೆ ತಕ್ಷಣವೇ ನಗರ ಪಾಲಿಕೆ ಯಾಗಲೀ, ಸಂಬಂಧಪಟ್ಟ ಇಲಾಖೆಯಾಗಲೀ ಗಮನ ಹರಿಸಿ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಲು ಮುಂದಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮರದಲ್ಲಿ ಹರಿವ ವಿದ್ಯುತ್: ಇದೇ ವೃತ್ತದ ರಸ್ತೆ ಬದಿಯಲ್ಲಿನ ಮರವೊಂದಕ್ಕೆ ಹೈಟೆನ್ಷನ್ ವೈರ್ ಅಂಟಿಕೊಂಡಿದ್ದು, ಅಲ್ಲದೇ ಮರದೊಳಗೇ ಬೀದಿ ದೀಪದ ಕಂಬವೂ ಸಹ ಹಾದು ಹೋಗಿದೆ. ಇದರಿಂದ ಮರ ಮತ್ತು ನೆಲದಲ್ಲಿ ವಿದ್ಯುತ್ ಹರಿಯುತ್ತಿದ್ದು, ಗ್ರೌಂಡ್ ಆಗುತ್ತಿದೆ. ಹೀಗೆ ಪಾದಚಾರಿಯೋರ್ವ ಮರವನ್ನು ಮುಟ್ಟಿದಾಗ ಆತನಿಗೆ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಶಾಕ್ ಹೊಡೆದಿದ್ದು, ಆತ ಅದೃಷ್ಟವಶಾತ್ ಪಾರಾಗಿದ್ದಾನೆ. ಈ ಬಗ್ಗೆಯೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕೆಂಬ ಮನವಿ ಮಾಡಲಾಗುತ್ತಿದೆ.

error: Content is protected !!