ಭಾನುವಾರವೂ ಸಹ ಕರ್ಪ್ಯೂಗೆ ಉತ್ತಮ ಸ್ಪಂದನೆ

ದಾವಣಗೆರೆ, ಜ.16- ವಾರಾಂತ್ಯ ಕರ್ಪ್ಯೂಗೆ ಭಾನುವಾರವೂ ಸಹ ಜನರ ಸ್ಪಂದನೆ ಉತ್ತಮವಾಗಿದ್ದು, ಬಸ್ ಸಂಚಾರ ಎಂದಿನಂತೆ ಇದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿರುವುದು ಕಂಡುಬಂದಿತು.

ತಾಲ್ಲೂಕು ಕಚೇರಿ ಬಳಿ ಇರುವ ತರ ಕಾರಿ ಮಾರುಕಟ್ಟೆ, ಬಾಳೆಕಾಯಿ ಮಂಡಿ ಗಳು ತೆರೆದಿದ್ದರೂ ಸಹ ಖರೀದಿಸುವ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಇತ್ತು.

ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿ, ಹಳೆಪೇಟೆಯ ಶ್ರೀ ವೀರಭದ್ರೇ ಶ್ವರ, ಶ್ರೀ ಬೀರಲಿಂಗೇಶ್ವರ ಸೇರಿದಂತೆ ನಗರದ ವಿವಿಧ ಭಾಗಗಳ ದೇವಸ್ಥಾನಗಳು ತೆರೆದಿದ್ದು, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತೀರ್ಥ ಪ್ರಸಾದ ವಿನಿಯೋಗವಿರಲಿಲ್ಲ. ಭಕ್ತರು ಸಹ  ದರ್ಶನ ಪಡೆದು ತಮ್ಮ ಭಕ್ತಿ ಸಮರ್ಪಿಸಿದರು.

ಪಿ.ಬಿ. ರಸ್ತೆ, ಅಶೋಕ ರಸ್ತೆ, ಜಯದೇವ ವೃತ್ತ, ಎವಿಕೆ ಕಾಲೇಜು ರಸ್ತೆ, ರಾಮ್ ಅಂಡ್ ಕೋ ಸರ್ಕಲ್, ಚರ್ಚ್ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ, ವಿದ್ಯಾನಗರ, ನೂತನ ಕಾಲೇಜು ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಿರಾಣಿ ಅಂಗಡಿಗಳು, ಬೇಕರಿಗಳು, ಜ್ಯೂಸ್ ಸ್ಟಾಲ್‌ಗಳು, ಮೆಡಿಕಲ್ ಶಾಪ್‌ಗಳು, ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆಗಳು, ಸಣ್ಣ ಪುಟ್ಟ ಚಹಾದಂಗಡಿಗಳು ವ್ಯಾಪಾರ ವಹಿವಾಟು ನಡೆಸಿದವು. ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ ಎಂದಿನಂತೆ ಮುಂದುವರೆದಿತ್ತು.

ಕಬ್ಬಿಣ ಮತ್ತು ಸಿಮೆಂಟ್, ಎಲೆಕ್ಟ್ರಿಕ್ ಅಂಗಡಿಗಳು ತೆರೆದಿದ್ದು, ವ್ಯಾಪಾರ ಮಾತ್ರ ಮಂದಗತಿಯಲ್ಲಿ ಸಾಗಿತ್ತು.

ಮಾಂಸದ ಅಂಗಡಿಗಳಿಗೆ ಹೆಚ್ಚಿದ ಬೇಡಿಕೆ: ನಗರದ ವಿವಿಧ ಭಾಗಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಕೆಲವು ಅಂಗಡಿಗಳಲ್ಲಿ ಮಾಂಸ ಖರೀದಿಗಾಗಿ ಜನರು ಮುಗಿಬಿದ್ದಿದ್ದರು.

ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದರೂ, ಹಳೆ  ಭಾಗದಲ್ಲಿ ಮಾತ್ರ ಯಾರೊಬ್ಬರೂ ಕೂಡ ಮಾಸ್ಕ್ ಧರಿಸಿದೇ, ಸಾಮಾಜಿಕ ಅಂತರ ಕಾಪಾಡದೇ ಜನರು ಓಡಾಡುತ್ತಿರುವುದು ಕಂಡುಬಂತು. ವಾಹನಗಳ ಸಂಚಾರ ಎಂದಿನಂತೆ ಇತ್ತು. ಈ ಭಾಗದಲ್ಲಿ  ಸೆಲೂನ್‌ಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು.

ಕೆಲವು ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. 

error: Content is protected !!