ವಿಶ್ವ ಪ್ಲಂಬರ್ ಹಾಗೂ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಶ್ರೀಗಳು
ದಾವಣಗೆರೆ, ಮಾ.23- ದೊಡ್ಡ ಕಟ್ಟಡಗಳು, ಅಣೆಕಟ್ಟುಗಳಂತಹ ಮಹಾನ್ ಯೋಜನೆಗಳ ನಿರ್ಮಾಣ ದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಕಾರ್ಮಿಕರ ಹಿತಾಸಕ್ತಿಯನ್ನು ಸರ್ಕಾರಗಳು ಕಾಪಾಡಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದಿಂದ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪ್ಲಂಬರ್ ದಿನಾಚರಣೆ, ವಿಶ್ವ ಜಲ ದಿನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೇ ನಿಜವಾದ ದೇಶ ನಿರ್ಮಾ ತೃಗಳು. ಪ್ರತಿವರ್ಷ ಮೇ 1 ರಂದು ಕಾರ್ಮಿಕರ ದಿನ ಆಚರಿಸಿದರೆ ಸಾಲದು, ಬದಲಿಗೆ ಕಾರ್ಮಿಕರಿಗೆ ಸಲ್ಲ ಬೇಕಾದ ಗೌರವಗಳನ್ನೂ ಕೂಡ ಸರ್ಕಾ ರಗಳು ನೀಡಬೇಕೆಂದು ಹೇಳಿದರು.
ಸುಂದರ ಕಟ್ಟಡ ಅಥವಾ ಸ್ಮಾರಕದ ನಿರ್ಮಾಣದ ಹಿಂದೆ ಕಟ್ಟಡ ಕಾರ್ಮಿಕರ ಶ್ರಮ ಸಾಕಷ್ಟಿರುತ್ತದೆ. ಈ ರೀತಿಯ ಕಟ್ಟಡಗಳಲ್ಲಿ ಪ್ಲಂಬರ್ಗಳಾಗಿ ಕೆಲಸ ಮಾಡುವವರು ಕೇವಲ ಪೈಪುಗಳನ್ನು ಜೋಡಿಸುವುದಿಲ್ಲ. ಬದಲಿಗೆ ಮಾನವೀಯ ಸಂಬಂಧಗಳನ್ನು ಕೂಡ ಜೋಡಿಸುವ ಕೆಲಸ ಮಾಡುತ್ತಾರೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರ ಕೊಡುಗೆಯನ್ನು ಯಾರೂ ಕೂಡ ಮರೆಯುವಂತಿಲ್ಲ. ನಿಮ್ಮ ಸವಲತ್ತುಗಳನ್ನು ಪಡೆಯಲು ಸಂಘಟನೆ ಮತ್ತು ಹೋರಾಟ ಮತ್ತಷ್ಟು ಗಟ್ಟಿಯಾಗಲಿ ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ಮಾತನಾಡಿ, ಕಾರ್ಮಿಕರಿಗೆ ಸೇರಬೇಕಾದ ಹಣ ಉಳ್ಳವರ ಪಾಲಾ ಗುತ್ತಿದೆ. ನಿಜವಾದ ಹಕ್ಕು ಸಲ್ಲಬೇಕಾ ದರೆ ಸಂಘಟಿತ ಹೋರಾಟದ ಅಗತ್ಯ ವಿದೆ. ಕಟ್ಟಡ ಇತರೆ ನಿರ್ಮಾಣದಲ್ಲಿ 36 ಬಗೆಯ ಕಾರ್ಮಿಕರರು ಒಳಪಡುತ್ತಾರೆ. ಆದರೆ ಈವರೆಗೂ ಆಳುವ ಸರ್ಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇವಗೌಡರು ಪ್ರಧಾನಮಂತ್ರಿಗಳಾಗಿದ್ದಾಗ ಗೃಹ ಸಚಿವರಾಗಿದ್ದ ಕಾರ್ಮಿಕ ಮುಖಂಡ ಇಂದ್ರಜಿತ್ ಗುಪ್ತಾ ಅವರ ನೇತೃತ್ವದ ಸಮಿತಿ ಕಾರ್ಮಿಕರಿಗೆ ಗುರುತಿನ ಕಾರ್ಡ್, ಕಲ್ಯಾಣ ಮಂಡಳಿ ರಚನೆ, ಮಕ್ಕಳಿಗೆ ಉಚಿತ ಶಿಕ್ಷಣ, ಅಪಘಾತವಾದರೆ 5 ಸಾವಿರ ಪೆನ್ಷನ್ ಸೇರಿದಂತೆ ಅನೇಕ ಬೇಡಿಕೆ ಇಟ್ಟು ಆಯೋಗ ರಚನೆ ಮಾಡಲಾಯಿತು. ನಂತರ ದೇವೇಗೌಡರು 1996ರಲ್ಲಿ ಕಟ್ಟಡ ನಿರ್ಮಾಣ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡುವಂತೆ ಆದೇಶ ಮಾಡಿದರು. ಆದರೆ ಬಹತೇಕ ರಾಜ್ಯಗಳಲ್ಲಿ ಮಂಡಳಿ ರಚನೆಯಾಗದ ಪರಿಣಾಮ ಕಾರ್ಮಿಕರ ಬವಣೆ ನೀಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಸಂಘದ ಅಧ್ಯಕ್ಷ ಎಸ್.ಡಿ. ರುದ್ರೇಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಶೆಟ್ಟರ್, ಉಪಾಧ್ಯಕ್ಷ ಸಿದ್ದಲಿಂಗಪ್ಪ, ಎಸ್.ಕೆ. ಶ್ರೀಧರ್, ಮಾರುತಿ ಶೆಟ್ರು, ಆಕಾಶ್ ಬಾದಾಮಿ, ಪವನ್ ಕುಮಾರ್, ವೇಣುಗೋಪಾಲ್ ಹಾಗೂ ಇತರರು ಇದ್ದರು.