ಮಹಿಳಾ ವೈದ್ಯರ ರಾಜ್ಯ ಸಮ್ಮೇಳನದಲ್ಲಿ ಡಾ.ವೀರಭದ್ರಪ್ಪ ವಿ. ಚಿನಿವಾಲರ್
ವೈದ್ಯೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಬಹುದು. ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬಹುದು.
– ಡಾ.ಬಿ.ಎಂ. ಹರ್ಷ, ಐಎಂಎ ಜಿಲ್ಲಾಧ್ಯಕ್ಷ
ದಾವಣಗೆರೆ, ಮಾ.16- ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸಾಹಿತ್ಯ, ಶಿಕ್ಷಣ, ರಾಜಕೀಯ, ವೈದ್ಯಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಆದಾಗ್ಯೂ ಸ್ತ್ರೀ ಸಮಾನತೆ ಹೋರಾಟ ನಡೆಯುತ್ತಲೇ ಇದ್ದು, ಆದಷ್ಟು ಶೀಘ್ರ ಹೋರಾಟಕ್ಕೆ ಫಲ ದೊರೆಯಲಿ ಎಂದು ಐಎಂಎ-ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ವೀರಭದ್ರಪ್ಪ ವಿ. ಚಿನಿವಾಲರ್ ಆಶಿಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇ ಷನ್ ವತಿಯಿಂದ ದಾವಣಗೆರೆ ಜಿಲ್ಲಾ ಘಟಕದ ಮಹಿಳಾ ವೈದ್ಯರ ವಿಭಾಗದ ಸಹಯೋಗ ದೊಂದಿಗೆ ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ರುವ ಐಎಂಎ ಭವನದಲ್ಲಿ 7ನೇ ರಾಜ್ಯ ಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ಪ್ರಗತಿ-2025 ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಮಾಜದ ಪ್ರಮುಖ ಭಾಗ. ಹಾಗಾಗಿ ಅವರನ್ನು ಸಶಕ್ತೀಕರಣ ಗೊಳಿ ಸದೆ ಈ ಸಮಾಜವು ಪರಿಪೂರ್ಣವಾಗುವು ದಿಲ್ಲ. ಹಲವಾರು ವರ್ಷಗಳಿಂದ ಲಿಂಗ ಸಮಾ ನತೆಯ ಕೂಗು ಕೇಳುತ್ತಲೇ ಇದೆ. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗ ಸಮಾನತೆ ಬಗ್ಗೆ ದನಿ ಎತ್ತಿದ್ದರು ಎಂದು ಹೇಳಿದರು. 14ನೇ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ಬಲಿಯಾದ ಆನಂದಿಬಾಯಿ ಜೋಶಿ ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಪದವಿ ಪಡೆದ ಮೊದಲ ಭಾರತೀಯ ಮಹಿಳೆ. ಇವರು ಎಲ್ಲಾ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಭಾರತ ದೇಶದಲ್ಲಿ ವೈದ್ಯಕೀಯ ಸೇವೆಗಳ ಕೊರತೆಯಿಂದಾಗಿ ತನ್ನ ನವಜಾತ ಶಿಶುವಿನ ಸಾವು ಸಂಭವಿಸಿದೆ ಎಂದು ಆನಂದಿಬಾಯಿ ಅರಿತುಕೊಂಡ ಅವರು ತಮ್ಮ ವೈದ್ಯಕೀಯ ಕನಸು ಕಾಣಲಾರಂಭಿಸಿದರು. ಪತಿಯ ಪ್ರೋತ್ಸಾಹ, ದೃಢ ನಿಶ್ಚಯದಿಂದ ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದರು. 1886 ರಲ್ಲಿ, ಆನಂದಿಬಾಯಿ ವೈದ್ಯಕೀಯ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು. ಭಾರತಕ್ಕೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ, ಅವರು ಕ್ಷಯರೋಗಕ್ಕೆ ತುತ್ತಾಗಿ ಅವರ 22 ನೇ ವಯಸ್ಸಿನಲ್ಲಿಯೇ ಮರಣ ಹೊಂದಿದರು.
ಡಾ. ಆನಂದಿಬಾಯಿ ಅವರ ವೈದ್ಯಕೀಯ ಕ್ಷೇತ್ರದ ಉಜ್ವಲ ಪ್ರಯಾಣವು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕನಸಿನ ವೃತ್ತಿ ಜೀವನವನ್ನು ಮುಂದುವರೆಸಲು ಬಯಸುವ ಅಸಂಖ್ಯಾತ ಮಹಿಳೆಯರಿಗೆ ಸಾಕ್ಷಿಯಾಗಿದೆ. ಇಂದು ಅವರನ್ನು ಸ್ಮರಿಸುವ ದಿನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಎಂಎ ದಾವಣಗೆರೆ ಜಿಲ್ಲಾಧ್ಯಕ್ಷ ಡಾ.ಬಿ.ಎಂ.ಹರ್ಷ ಬುಳ್ಳಾಪುರ ಮಾತನಾಡಿ, ಮಹಿಳಾ ವೈದ್ಯೆಯರ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಹಿತ ಕಾಯುವ ಸಲುವಾಗಿ ಮಹಿಳಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ವೈದ್ಯೆಯರನ್ನು ಒಂದೇ ವೇದಿಕೆಯಡಿ ತರುವುದು ಇದರ ಉದ್ದೇಶವಾಗಿದೆ. ಮಹಿಳಾ ವೈದ್ಯೆಯರಿಗೆ ಪರಸ್ಪರ ಬೆಂಬಲ, ಸುರಕ್ಷತೆ, ಕೌಶಲ್ಯಾಭಿವೃದ್ಧಿ, ಕೆಲಸದ ಸ್ಥಳದಲ್ಲಿ ಸೌಲಭ್ಯ ಕಲ್ಪಿಸುವುದು ಮುಖ್ಯ ಧ್ಯೇಯವಾಗಿದೆ. ವೈದ್ಯೆಯರ ಸಮುದಾಯ ಸೇವೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ವೈದ್ಯೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಬಹುದು. ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬಹುದು. ಯುವ ವೈದ್ಯರಿಗೆ ಮಾರ್ಗದರ್ಶನ ನೀಡುವ ಜೊತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಾಮಾಜಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಅಗತ್ಯತೆಗೆ ಸ್ಪಂದಿಸುವ ವಾತಾವರಣ ನಿರ್ಮಾಣವಾಗಬೇಕು. ಈ ದಿಸೆಯಲ್ಲಿ ಮಹಿಳಾ ವಿಭಾಗವು ಕಾರ್ಯೋನ್ಮುಖವಾಗಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೊಫೆಷನಲ್ ಪ್ರೊಟೆಕ್ಷನ್ ಸ್ಕೀಮ್ ನ ಆನ್‌ಲೈನ್ ನೋಂದಣಿ ಪೋರ್ಟಲ್ ಗೆ ಚಾಲನೆ ನೀಡಲಾಯಿತು. ಹಿರಿಯ ಮಹಿಳಾ ವೈದ್ಯೆಯರನ್ನು ಸನ್ಮಾನಿಸಲಾಯಿತು.
ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಮಾಳವೇಗೌಡ, ಐಎಂಎ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಡಾ.ರಜನಿ, ಡಾ.ಶ್ವೇತಾ ರಾಮು, ಡಾ.ಹರೀಶ ಬೆಳವಂತಬೆಟ್ಟು, ಡಾ.ಎನ್.ಎಸ್.ಚೈತಾಲಿ, ಡಾ.ವಾಣಿ ಕೋರಿ, ಡಾ.ಕೆ.ಎನ್.ಮಧುಸೂದನ, ಡಾ.ಶಾಂತಿ, ಡಾ.ರೇಣು, ಡಾ.ಛಾಯಾ, ಡಾ.ಶೋಭಾ ಧನಂಜಯ್, ಡಾ.ಸೀಮಾ ಬಿಜ್ಜರಗಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳು ಮಹಿಳಾ ಸಂಬಂಧಿತ ವಿಷಯಗಳ ಕುರಿತು ಗೋಷ್ಠಿಗಳನ್ನು ನಡೆಸಿಕೊಟ್ಟರು.