ಇಂದಿನಿಂದ `ಕೌಶಲ್ಯ’ ಉಚಿತ ಉದ್ಯೋಗಾಧಾರಿತ ತರಬೇತಿ ಆಯ್ಕೆ ಪ್ರಕ್ರಿಯೆ

ಇಂದಿನಿಂದ `ಕೌಶಲ್ಯ’ ಉಚಿತ ಉದ್ಯೋಗಾಧಾರಿತ ತರಬೇತಿ ಆಯ್ಕೆ ಪ್ರಕ್ರಿಯೆ

ದಾವಣಗೆರೆ, ಮಾ. 16- ಎಸ್.ಎಸ್.ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಕ್ಯೂ ಸ್ಪೈಡರ್ಸ್ ತರಬೇತಿ ಸಂಸ್ಥೆ (ಬೆಂಗಳೂರು) ಇವರ ಸಹಯೋಗದಲ್ಲಿ `ಕೌಶಲ್ಯ’ ಕ್ಯಾಂಪಸ್‌ನಿಂದ ಕಾರ್ಪೊರೇಟ್‌ ವರೆಗೂ ಎನ್ನುವ ಧ್ಯೇಯದೊಂದಿಗೆ ಉಚಿತ ಉದ್ಯೋಗಾಧಾರಿತ 60 ದಿನಗಳ ತರಬೇತಿ ಶಿಬಿರವನ್ನು  ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ `ಕೌಶಲ್ಯ’ ಉಚಿತ ಬೃಹತ್ ಉದ್ಯೋಗಾಧರಿತ ತರಬೇತಿ ಶಿಬಿರವನ್ನು ಬೆಂಗಳೂರಿನ ಕ್ಯೂ-ಸ್ಪೈಡರ್ಸ್ ಹಾಗೂ ದಾವಣಗೆರೆ ವಿವಿ ಸಹಭಾಗಿತ್ವದಲ್ಲಿ ನಡೆಸುವುದಾಗಿ ತಿಳಿಸಿದರು.

ನಾಳೆ ದಿನಾಂಕ 17 ರಿಂದ 20 ರವರೆಗೆ ಮೊದಲ ಹಂತದ ತರಬೇತಿಗಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ದಾವಣಗೆರೆ ವಿವಿ ವ್ಯಾಪ್ತಿಯ  ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಕಾಲೇಜುಗಳ 1200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಇವರಿಗೆ 60 ದಿನಗಳ ಕಾಲ ಉಚಿತ ತರಬೇತಿ ನೀಡಲಾಗುತ್ತದೆ ಎಂದರು.

2 ನೇ ಹಂತದಲ್ಲಿ ತಾಲ್ಲೂಕು ಮಟ್ಟದಲ್ಲಿ ಹಾಗೂ ಸ್ನಾತಕೋತ್ತರ, ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು. ಬಿ.ಕಾಂ., ಬಿ.ಎ., ಬಿ.ಬಿ.ಎಂ. ವಿದ್ಯಾರ್ಥಿಗಳಿಗೆ ಬಾಪೂಜಿ ಎಂಬಿಎ ಕಾಲೇಜಿನಲ್ಲಿ, ಬಿಎಸ್ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಬಿಐಇಟಿ ಕಾಲೇಜು ಆವರಣದಲ್ಲಿ ತರಬೇತಿ ನೀಡಲಾಗುವುದು. ಕಾಲೇಜಿನ ತರಗತಿಗಳು ಮುಗಿದ ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತರಬೇತಿ ನೀಡಲಾಗುತ್ತದೆ.

ಕಾಲೇಜು ಹಂತದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ 5046 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಇದರಲ್ಲಿ 1200 ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ತರಬೇತಿ ಮುಕ್ತಾಯವಾದ ತಕ್ಷಣ ಪ್ರತಿಷ್ಠಿತ ಕಂಪನಿಗಳಲ್ಲಿ ಸಂದರ್ಶನದ ಮೂಲಕ ಹಾಗೂ ಉದ್ಯೋಗ ಮೇಳಗಳ ಮೂಲಕ ಉದ್ಯೋಗದ ಅವಕಾಶ ಕಲ್ಪಿಸಿಕೊಡಲಾಗುವುದು.

ಇದೇ ದಿನಾಂಕ 22 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತರಬೇತಿಯು ಇದೇ ದಿನಾಂಕ 26 ರಂದು ಬುಧವಾರದಿಂದ ನಿಗದಿಪಡಿಸಿದ ಆಯಾ ಕಾಲೇಜುಗಳ ಆವರಣದಲ್ಲಿ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಆಯಾ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉದ್ಯೋಗಾಧಿಕಾರಿಗಳನ್ನು ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ವಿವಿ ಉಪ ಕುಲಪತಿ ಪ್ರೊ.ಬಿ.ಡಿ. ಕುಂಬಾರ್, ಪ್ರಶಾಂತ್, ಸತೀಶ್, ಶಶಿಧರ್, ವಿರೂಪಾಕ್ಷಯ್ಯ, ವೀರೇಶ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!