ದಾವಣಗೆರೆ, ಮಾ.13- ಹೋಳಿ ಹುಣ್ಣಿಮೆ ರಂಗಿನಾಟಕ್ಕೆ ದೇವನಗರಿ ಸಜ್ಜಾಗಿದ್ದು, ಶುಕ್ರವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಬಣ್ಣದ ಲೋಕದಲ್ಲಿ ನಗರ ಮಿಂದೇಳಲಿದೆ.
ರಂಗು-ರಂಗಿನಾಟಕ್ಕೆ ನಗರದಲ್ಲಿ ಭರಪೂರ ಸಿದ್ಧತೆಗಳು ನಡೆದಿವೆ. ಯುವಕ-ಯುವತಿಯರನ್ನು ಆಕರ್ಷಿಸಲು ಕೆಲ ಸಂಘ-ಸಂಸ್ಥೆಗಳು ಸಜ್ಜಾಗಿವೆ. ಪ್ರಮುಖವಾಗಿ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ರಂಗೇರಲಿದೆ. ಡಿಜೆ ಸದ್ದು, ಕೃತಕ ಮಳೆ ಸೃಷ್ಟಿಸಿ ಯುವಸಮುದಾಯವನ್ನು ಆಕರ್ಷಿಸಲು ಸಿದ್ಧತೆ ನಡೆದಿದೆ.
ಬಣ್ಣದೋಕುಳಿ ನಿಮಿತ್ತ ಈಗಾಗಲೇ ಮಾರುಕಟ್ಟೆಯಲ್ಲಿ ಮಕ್ಕಳ ಬಣ್ಣದಾಟಕ್ಕಾಗಿ ಪಿಚಕಾರಿ, ಬಣ್ಣ, ಖರೀದಿ ಜೋರಾಗಿ ಯೇ ನಡೆದಿದೆ. ಕುಟುಂಬ ಸಮೇತರಾಗಿ ಮಾರ್ಕೆಟ್‌ಗೆ ಆಗಮಿಸಿದ ಗ್ರಾಹಕರು, ಮಕ್ಕಳ ಇಷ್ಟಕ್ಕೆ ಪೂರಕವಾದ ಸಾಮಗ್ರಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೋಳಿ ಹಬ್ಬಕ್ಕೆ ನಾಲ್ಕೈದು ದಿನಗಳ ಹಿಂದೆ ಸ್ಥಳೀಯರಲ್ಲಿ ತುಸು ಗೊಂದಲ ಉಂಟಾಗಿತ್ತು. ಈ ಬಾರಿ ರಾಂ ಅಂಡ್ ಕೋ ವೃತ್ತದ ಬದಲು ಜಯದೇವ ವೃತ್ತದಲ್ಲಿ ಹೋಳಿ ಆಚರಣೆ ನಡೆಯಲಿದೆ ಎಂಬ ಮಾತು ಕೇಳಿ ಬಂದವು. ಕೆಲವರು ಎರಡೂ ಕಡೆ ಹೋಳಿ ನಡೆಯಲಿದೆ ಎಂದರು. ಬಣ್ಣ ಬಣ್ಣದ ಬಟ್ಟೆಗಳಿಂದ ಜಯದೇವ ವೃತ್ತವನ್ನು ಸಿಂಗರಿಸಲಾಗಿತ್ತು. ಆದರೆ ಅಂತಿಮವಾಗಿ ಜಯದೇವ ವೃತ್ತದಲ್ಲಿ ಹೋಳಿ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಎಂದಿನಂತೆ ರಾಂ ಅಂಡ್ ಕೋ ವೃತ್ತದಲ್ಲಿಯೇ ನಡೆಯಲಿದೆ.
ಈ ಬಾರಿಯ ಹೋಳಿ ಶುಕ್ರವಾರವಾಗಿರುವುದರಿಂದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆಯೂ ಇರುವುದರಿಂದ ಬಲವಂತವಾಗಿ ಬಣ್ಣ ಎರಚದಂತೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.