ಹರಿಹರ, ಮಾ. 13 – ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ದುಂದು ವೆಚ್ಚ ಮಾಡಬೇಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹರಿಹರ ತಾಲ್ಲೂಕಿನ ಮುಖಂಡ ಬೆಳ್ಳೂಡಿ ಬಸವರಾಜ್ ಹಾಗೂ ಹಾಲೇಶ್ ಗೌಡ್ರು ಅವರುಗಳು ದೇವರಬೆಳಕೆರೆಯ ಸಿದ್ದವೀರಪ್ಪ ನಾಲೆಯ ಬಲದಂಡೆ ನಾಲೆ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಈ ಮೂಲಕ ಸಂಸದ ಜನ್ಮ ದಿನಕ್ಕೆ ಶುಭ ಕೋರಿದ್ದಾರೆ.
ಗುರುವಾರ ಬೆಳಗಿನಿಂದಲೇ ಜೆಸಿಬಿ ಯಂತ್ರದ ಮೂಲಕ ದೇವರಬೆಳಕೆರೆ, ಕಡ್ಲೆಗುಂದಿ, ಸಲಗನಹಳ್ಳಿ, ಬನ್ನಿಕೊಡು, ಶಿವನಹಳ್ಳಿ, ಬೆಳ್ಳೂಡಿ, ಹನಗವಾಡಿ ಮಾರ್ಗವಾಗಿ ಹರಿಹರ ತಲುಪುವ ಈ ನಾಲೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾದರಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಮುಖಂಡರು, ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಮಹಿಳಾ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ನಮಗೆಲ್ಲಾ ಮಾದರಿಯಾಗಿದ್ದಾರೆ. ತಮ್ಮ ಜನ್ಮ ದಿನಕ್ಕೆ ದುಂದುವೆಚ್ಚ ಮಾಡಬಾರದು ಎಂಬ ಸಂದೇಶ ನೀಡುವ ಮೂಲಕ ಸರಳತೆ ತೋರಿದ್ದಾರೆ.
ಇದರಿಂದ ನಮಗೂ ಪ್ರೇರಣೆ ದೊರೆತಿದ್ದು, ನಾವು ಕೂಡ ಜನರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ಹಾಗೂ ನೀರಿನ ಸಮಸ್ಯೆ ಬಾರದಂತೆ ನಾಲೆಯ ಹೂಳು ತೆಗೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಬಸವರಾಜ್ ಬೆಳ್ಳೂಡಿ, ಹಾಲೇಶ ಗೌಡ್ರು ಗುತ್ತೂರು, ಸತ್ಯಕುಮಾರ್ ನಂದಿಗಾವಿ, ಬಿ.ಜಿ. ಉಜ್ಜಪ್ಪ, ಹನುಮಂತಪ್ಪ ಶಿವನಹಳ್ಳಿ, ಉಮೇಶ್ ಸಾರಥಿ, ಯುವರಾಜ್ ಬೆಳ್ಳೂಡಿ, ಹನುಮಂತ ಗೌಡ್ರು ಹೊಸಳ್ಳಿ, ಟಿ.ಜೆ. ಮುರುಗೇಶಪ್ಪ, ಎಇಇ ಕೃಷ್ಣಮೂರ್ತಿ, ಆಂಜನೇಯ ಬಿ.ಪಿ. ಶಿವನಹಳ್ಳಿ, ರಾಮನಗೌಡ ಸೇರಿದಂತೆ, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.