ದಾವಣಗೆರೆ, ಮಾ. 13 – ಪ್ರತಿಷ್ಠಿತ ಹಿಂದುಳಿದ ಸಮುದಾಯಗಳ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ಎಸ್ಪಿ-ಐಜಿಪಿ ಕಛೇರಿಗಳಿರುವ ಜಿಲ್ಲಾ ಪೊಲೀಸ್ ಭವನದ ಎದುರಿನ ಶ್ರೀ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಬಳಿಯ ವಿಶಾಲವಾದ ನಿವೇಶನದಲ್ಲಿ ಅಂಬಾಭವಾನಿ ಬ್ಯಾಂಕಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಗಣ್ಯರ ಸಮ್ಮುಖದಲ್ಲಿ ಶಂಕುಸ್ಥಾಪನೆ ಕಾರ್ಯವನ್ನು ನಡೆಸಲಾಯಿತು.
ಅತಿ ಹಿಂದುಳಿದ ಐದು ಸಮಾಜಗಳಾದ ಮರಾಠ ಕ್ಷತ್ರಿಯ, ಸ್ವಕುಳಸಾಳಿ, ಭಾವಸಾರ, ನಾಮದೇವ ಮತ್ತು ಸೋಮವಂಶ ಸಹಸ್ರಾರ್ಜುನ ಸಮಾಜಗಳು ಒಗ್ಗೂಡಿ ಕಳೆದ 30 ವರ್ಷಗಳ ಹಿಂದೆ ಈ ಬ್ಯಾಂಕ್ ಸ್ಥಾಪಿಸಿದ್ದು, ಸದಾ ಪ್ರಗತಿಯನ್ನು ಕಾಯ್ದುಕೊಂಡು ಮುನ್ನಡೆಯುವುದರ ಮೂಲಕ ಸಮಾಜದಲ್ಲಿ ತನ್ನದೇ ಆದ ಹೆಸರು ಗಳಿಸಿದೆ.
ಭೂಮಿ ಪೂಜೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವ ಚನದಲ್ಲಿ, ಅಂಬಾಭವಾನಿ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗಿರುವುದು ತನ್ನ ಸದೃಢತೆ ಯನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿ, ಈ ಬ್ಯಾಂಕಿನಿಂದ ಫಲಾನುಭವಿಗಳು ಆರ್ಥಿಕ ನೆರವು ಪಡೆದು ತಮ್ಮ ಬಾಳನ್ನು ಹಸನಾಗಿಸಿ ಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೂಡಾ ಮಾಜಿ ಅಧ್ಯಕ್ಷರೂ, ಅಂಬಾಭಾವಾನಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಯಶವಂತರಾವ್ ಜಾಧವ್ ಮಾತನಾಡಿ, ಐದು ಸಮಾಜಗಳ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಮತ್ತಷ್ಟು, ಮೊಗದಷ್ಟು ಭದ್ರವನ್ನಾಗಿಸುವತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ದೂಡಾ ಮಾಜಿ ಅಧ್ಯಕ್ಷರೂ, ಅಂಬಾಭವಾನಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಮಾಲತೇಶ ಡಿ. ಜಾಧವ್ ಮಾತನಾಡಿ, ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಶ್ರಮ ಹಾಗೂ ಸದಸ್ಯರ – ಗ್ರಾಹಕರ ಪ್ರೋತ್ಸಾಹದಿಂದಾಗಿ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದು ಶ್ಲ್ಯಾಘನೀಯ ಎಂದರು.
ಬ್ಯಾಂಕಿನ ಮಾಜಿ ಅಧ್ಯಕ್ಷರೂ ಮಹಾನಗರ ಪಾಲಿಕೆ ಮಾಜಿ ಮಹಾಪೌರರೂ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎಂ.ಎಸ್. ವಿಠ್ಠಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಿಂದುಳಿದ ವರ್ಗಗಳ ಹಿರಿಯರು ಸೇರಿ ಕೇವಲ ಒಂದು ನೂರು ರೂಪಾಯಿಯಿಂದ ಆರಂಭಿಸಿದ್ದ ಈ ಬ್ಯಾಂಕ್ ಸಾಧನೆಯಲ್ಲಿ ಮುನ್ನಡೆದಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಮಲ್ಲರಸಾ ಕಾಟ್ವೆ, ಬ್ಯಾಂಕಿನ ಮಾಜಿ ಅಧ್ಯಕ್ಷರೂ, ಹಿರಿಯ ಲೆಕ್ಕ ಪರಿಶೋಧಕರೂ ಆದ ಎ. ಕಿರಣ್‌ಕುಮಾರ್, ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಕರ್ನಾಟಕ ರಾಜ್ಯ ಸ್ವಕುಳ ಸಾಳಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಹನುಮಂತಪ್ಪ ಕ್ಷೀರಸಾಗರ, ಸ್ವಕುಳ ಸಾಳಿ ಸಮಾಜದ ಮುಖಂಡ ನಾಗೇಂದ್ರ ಸರೋದೆ, ಮರಾಠ ಸಮಾಜದ ಮುಖಂಡ ತಿಪ್ಪೇಶ್ ರಾವ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗೆ ತಾವು ಶ್ರಮಿಸುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಬಾಭವಾನಿ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಮಾನೆ ಮಾತನಾಡಿ, ಈ ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ಐದೂ ಸಮಾಜಗಳ ಬಾಂಧವರು ತನು-ಮನ-ಧನ ಸಹಾಯದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ಗಿರಿಧರ್ ಡಿ. ಮೆಹರ್ವಾಡೆ, ನಿರ್ದೇಶಕರುಗಳಾದ ಆರ್.ಜಿ. ಸತ್ಯನಾರಾಯಣ, ಗಣೇಶ್ ಪಿ. ಕ್ಷೀರಸಾಗರ, ಎಸ್.ಕೆ. ಮಧುಕರ್, ವಿ. ಮನೋಹರ್, ಆರ್. ವಿಠ್ಠಲ್, ಬಾಬು, ಶ್ರೀಮತಿ ಅನಿತಾಬಾಯಿ ಮಾಲತೇಶ್ ರಾವ್ ಜಾಧವ್, ಡಾ. ಎಸ್. ರಜನಿ, ಶ್ರೀಮತಿ ರೇಣುಕಾಬಾಯಿ, ರಾಜು ಎಲ್. ಬದ್ಧಿ, ಜಿ. ಯಲ್ಲಪ್ಪ, ವೃತ್ತಿಪರ ನಿರ್ದೇಶಕ ರಾಜು ವಿ. ಮಹೇಂದ್ರಕರ್ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ಅರವಿಂದ್ ಎಲ್. ಬದ್ಧಿ, ಡಾ. ತಿಪ್ಪೇಸ್ವಾಮಿ ಎಲ್. ಏಕಬೋಟೆ, ಮಾಜಿ ನಿರ್ದೇಶಕರುಗಳಾದ ಅಶೋಕ್ ರಾಯಭಾಗಿ, ರಮೇಶ್ ಕಾಟ್ವೆ, ಸೋಮಶೇಖರ್ ಬಾಬು, ಎಲ್. ಅಣ್ಣೋಜಿರಾವ್ ಮತ್ತಿತರರು ಉಪಸ್ಥಿತರಿದ್ದು ಬ್ಯಾಂಕಿನ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಬ್ಯಾಂಕಿನ ಉದ್ಯೋಗಿ ಶ್ರೀಮತಿ ಎಂ.ಸಿ. ಮಂಜುಳಾ ಅವರ ಪ್ರಾರ್ಥನೆ ನಂತರ, ನಿರ್ದೇಶಕ ಬಾಬುರಾವ್ ಎಸ್. ಸಾಳಂಕಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ನಿರ್ದೇಶಕ ಆನಂದ್ ಡಿ. ಸಫಾರೆ ಅವರಿಂದ ಪ್ರಾಸ್ತಾವಿಕ ಭಾಷಣ, ವೃತ್ತಿಪರ ನಿರ್ದೇಶಕ ಎ.ಸಿ. ರಾಘವೇಂದ್ರ ಮೊಹರೆ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ ಗೌಡನಕಟ್ಟೆ ಮತ್ತು ಸಹಾಯಕ ವ್ಯವಸ್ಥಾಪಕ ಅನಿಲ್ ಟಿ. ಮಾಳದಕರ್ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಲೆಕ್ಕಾಧಿಕಾರಿ ಎಂ. ನವೀನ್‌ಕುಮಾರ್, ಕ್ಯಾಷಿಯರ್ ವಿನಾಯಕ ಎಂ. ಕಾಟ್ವೆ, ಸಹಾಯಕರುಗಳಾದ ಸುಜಿತ್ ಕಾಟ್ವೆ, ಕೆ.ಟಿ. ಅಂಕುಶ, ವೈ. ಕಿರಣ್ ಚೌಹಾಣ್, ಶ್ರೀಮತಿ ನಿರ್ಮಲ, ಸಾಲ ವಸೂಲಾತಿ ಅಧಿಕಾರಿ ಎಂ. ದೇವೇಂದ್ರರಾವ್, ನಿತ್ಯನಿಧಿ ಸಂಗ್ರಹಕಾರರುಗಳಾದ ಕೆ. ರಾಘವೇಂದ್ರ, ಮಹೇಶ್ ಸೋಳಂಕಿ, ಗಣೇಶ್ ರಾವ್ ಪವಾರ್, ಆರ್. ಹನುಮಂತಪ್ಪ ಮತ್ತಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.