ರೈತ ಸಂಘ, ಡಿಎಸ್‌ಎಸ್ ನೇತೃತ್ವದಲ್ಲಿ ಕಬ್ಬೂರು ಗ್ರಾಮಸ್ಥರಿಂದ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ದಾವಣಗೆರೆ, ಮಾ. 10 – ಒತ್ತುವರಿಯಾಗಿರುವ ಗೋಮಾಳ ಜಮೀನು ಮತ್ತು ಕೆರೆಯನ್ನು ಆಧುನಿಕ ಉಪಕರಣಗಳಿಂದ ಹದ್ದುಬಸ್ತ್ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ), ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲ್ಲೂಕಿನ ಕಬ್ಬೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಟ್ರ್ಯಾಕ್ಟರ್‍ನಲ್ಲಿ ಆಗಮಿಸಿದ್ದ ಗ್ರಾಮಸ್ಥರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ರೈತ ಸಂಘದ (ಡಿಎಸ್‍ಎಸ್ ಮಂಜುನಾಥ್ ಬಣ, ಕುಂದುವಾಡ) ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಕಬ್ಬೂರು ಗ್ರಾಮದ ಸರ್ವೆ ನಂ. 31ರಲ್ಲಿ 71 ಎಕರೆ, ಸರ್ವೆ ನಂ. 32ರಲ್ಲಿ ಗೋಮಾಳ ಜಮೀನು ಇದೆ. ಸರ್ಕಾರಿ ಗೋಮಾಳ ಜಮೀನಿನಲ್ಲಿದ್ದ ಸ್ಮಶಾನದ ವಿರೂಪ, ಅಕ್ರಮವಾಗಿ ಮಣ್ಣು ಸಾಗಾಣಿಕೆ ಮತ್ತು ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರ ನಾಶ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಒತ್ತುವರಿಯಾಗಿರುವ ಗೋಮಾಳ ಜಮೀನು ಹಾಗೂ ಕೆರೆಯನ್ನು ಈಗಾಗಲೇ ಐದಾರು ಬಾರಿ ಅಳತೆ ಮಾಡಲಾಗಿದೆ. ಆದರೆ ಅಳತೆ ಮಾಡಲು ಬಂದ ಅಧಿಕಾರಿಗಳು ಒಂದು ಕುಟುಂಬದ ಕುಮ್ಮಕ್ಕಿನಿಂದ ಸರಿಯಾಗಿ ಅಳತೆ ಮಾಡದೇ ವ್ಯತ್ಯಾಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಈ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳು, ಕಬ್ಬೂರು ಗ್ರಾಮದ ಗೋಮಾಳ ಜಮೀನು ಮತ್ತು ಕೆರೆಯನ್ನು ಅಳತೆ ಮಾಡಿ ಹದ್ದುಬಸ್ತು ಮಾಡಲು, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಆದೇಶ ನೀಡಿದ್ದರು. ಕಳೆದ ಮಾ. 5 ರಂದು ಬುಧವಾರ ಭೂ ಮಾಪಕರು ಭೂಮಾಪನಕ್ಕೆ ಬೇಕಾದ ಗೋಮಾಳದ ಆಕಾರ (ನೀಲಿ ನಕ್ಷೆ) ಚೆಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿ, ಇತರೆ ಸಾಮಗ್ರಿಗಳಿಲ್ಲದೆ ಭಾಗಶಃ ಅಳತೆ ಮಾಡುವ ಸಂದರ್ಭದಲ್ಲಿ ಅಳತೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಡೆದರು. ವಸ್ತುಸ್ಥಿತಿ ಅಳತೆ ಮಾಡಲು ಒತ್ತಾಯಿಸಿದರೂ ಭೂಮಾಪಕರು ಮಾಡಲಿಲ್ಲ. ಬೇರೆ ಜಿಲ್ಲೆಯ ಭೂಮಾಪಕರನ್ನು ಕರೆಯಿಸಿ ಸರ್ವೇಯನ್ನು ಸರಿಯಾಗಿ ಮಾಡಬೇಕೆಂದು ಪಟ್ಟು ಹಿಡಿದರೂ ಭೂಮಾಪಕರು, ಗ್ರಾಮಸ್ಥರು ಅಳತೆ ಮಾಡಲು ಸಹಕಾರ ನೀಡಲಿಲ್ಲ ಎಂದು ಕುಂಟು ನೆಪವೊಡ್ಡಿ ಸದರಿ ಸ್ಥಳದಿಂದ ಹಿಂದಿರುಗಿ ಬಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಪ್ರಾಮಾಣಿಕವಾಗಿ ಇರುವ ಭೂಮಾಪಕರನ್ನು ಅಳತೆ ಮಾಡಲು ಕಳುಹಿಸಬೇಕು. ಆಧುನಿಕ (ಡಿಜಿಟಿಲ್) ಉಪಕರಣಗಳಿಂದ ಸರ್ಕಾರಿ ಗೋಮಾಳ ಮತ್ತು ಕೆರೆಯನ್ನು ಅಳತೆ ಮಾಡಬೇಕು, ಗೋಮಾಳದ ಆಕಾರ, ಚೆಕ್ಕುಬಂದಿ, ಟಿಪ್ಪಣಿ, ಸುತ್ತಮುತ್ತಲಿನ ಪಹಣಿಯೊಂದಿಗೆ ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮತ್ತು ತಹಶೀಲ್ದಾರ್ ಡಾ. ಅಶ್ವತ್ಥ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಗೋಮಾಳ ಮತ್ತು ಕೆರೆಯನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತ್ ಮಾಡಿಸಲು ತಹಶೀಲ್ದಾರ್, ಭೂಮಾಪನ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಂತರ ಯಾರು ಸಮಾಧಿ, ಸ್ಮಶಾನ ವಿರೂಪ, ಅಕ್ರಮವಾಗಿ ಮಣ್ಣು ಸಾಗಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಗ್ರಾಮಸ್ಥರಾದ ಮಂಜುನಾಥ ವೈ. ಕಬ್ಬೂರು, ಎನ್.ಎಂ. ಕೋಟ್ಯಪ್ಪ, ಮಲ್ಲಿಕಾರ್ಜುನ್, ಧನ್ಯಕುಮಾರ್, ಧರ್ಮಣ್ಣ, ಪ್ರಸನ್ನ, ರಾಮಸ್ವಾಮಿ ಎಲ್.ಪಿ., ಎನ್.ಶಿವಕುಮಾರ್, ದೇವರಾಜ್, ಎನ್.ಎಂ. ಕೋಟಿ, ಬಸವರಾಜ್ ಗೋಶಾಲೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.